ಕರಾವಳಿ

ಶಿರಾಡಿ ಘಾಟ್ ರಸ್ತೆ ಕಾಮಗಾರಿ ಸಂಪೂರ್ಣ : ಭಾರೀ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರಕ್ಕೆ ಮುಕ್ತ

Pinterest LinkedIn Tumblr

ಮಂಗಳೂರು ಆಗಸ್ಟ್. 02 : ಶಿರಾಡಿ ಘಾಟ್ ರಸ್ತೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿರುವುದರಿಂದ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ವಿಧಿಸಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಅಪೂರ್ಣ ಸ್ಥಿತಿಯಲ್ಲಿದ್ದ ತಡೆಗೋಡೆ ಮತ್ತು ರಸ್ತೆ ಬದಿಯಲ್ಲಿ ಮಣ್ಣು ಹಾಕುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಆಗಸ್ಟ್ 2 ರಿಂದ ಶಿರಾಡಿ ಘಾಟ್‍ನಲ್ಲಿ ಭಾರೀ ವಾಹನಗಳು ಸೇರಿದಂತೆ ಎಲ್ಲಾ ವಾಹನಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆದೇಶದಲ್ಲಿ ತಿಳಿಸಿದ್ದಾರೆ.

ಮಂಗಳೂರು -ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯ ಎರಡನೆ ಹಂತದ 12.3 ಕಿ.ಮೀ. ಕಾಂಕ್ರಿಟ್ ರಸ್ತೆ ಕಾಮಗಾರಿ 74 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡ ಕಾಮಗಾರಿಯನ್ನು ಜು.15ಕ್ಕೆ ಉದ್ಘಾಟಿಸಲಾಗಿತ್ತು. ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಘನ ವಾಹನಗಳ ಸಂಚಾರಕ್ಕೆ ನಿಷೇಧ ಮುಂದುವರಿದಿತ್ತು.

ಪ್ರಥಮ ಹಂತದ ಕಾಮಗಾರಿ ಹಾಸನದ ಮಾರ್ನಹಳ್ಳಿಯಿಂದ ಕೆಂಪುಹೊಳೆಯವರೆಗೆ 13 ಕಿ.ಮೀ. 2015ರಲ್ಲಿ ಪೂರ್ಣಗೊಂಡಿತ್ತು. ಇದರೊಂದಿಗೆ ಶಿರಾಡಿ ಘಾಟಿಯ 26 ಕಿ.ಮೀ. ದೂರದ ಘಾಟ್ ರಸ್ತೆಯ ಕಾಮಗಾರಿ ಪೂರ್ಣಗೊಂಡು ಜು.15ಕ್ಕೆ ಸಂಚಾರಕ್ಕೆ ಲಘು ವಾಹನಗಳಿಗೆ ಮಾತ್ರ ಮುಕ್ತಗೊಂಡಿತ್ತು.

ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯದಿಂದ ಕೆಂಪುಹೊಳೆಯವರೆಗಿನ ಕಾಂಕ್ರಿಟ್ ರಸ್ತೆ ಕಾಮಗಾರಿ 30 ವರ್ಷಕ್ಕೂ ಹೆಚ್ಚು ದೀರ್ಘ ಕಾಲ ಬಾಳಿಕೆ ಬರುವ ಕಾಮಗಾರಿಯಾಗಿದೆ. ಜರ್ಮನ್ ತಂತ್ರಜ್ಞಾನದ 10 ಕೋಟಿ ರೂ. ವೆಚ್ಚದ ಸ್ಲಿಪ್ ಫಾರ್ಮ್ ಫೇವರ್ ಯಂತ್ರದ ಮೂಲಕ ಕಾಂಕ್ರಿಟ್ ಕಾಮಗಾರಿ ನಿರ್ಮಿಸಿರುವುದು ವಿಶೇಷತೆಯಾಗಿದೆ.

45 ಸೆಂಟಿ ಮೀಟರ್ ಎತ್ತರದ ಡಿಎಲ್‌ಸಿ ಕಾಂಕ್ರಿಟ್ ಅಳವಡಿಕೆಯೊಂದಿಗೆ ಒಟ್ಟು 60 ಸೆಂಟಿ ಮೀಟರ್ ಎತ್ತರದ ಕಾಂಕ್ರಿಟ್ ರಸ್ತೆಯಾಗಿದೆ. ಪ್ರತಿ 25 ಮೀಟರ್‌ಗಳಿಗೆ ತಲಾ 75 ಅಡ್ಡಕಾಲುವೆ ನಿರ್ಮಿಸಲಾಗಿದೆ. ಅಪಾಯಕಾರಿ ತಿರುವುಗಳನ್ನು ಹೊಂದಿರುವ ಶಿರಾಡಿ ಘಾಟ್ ರಸ್ತೆಯಲ್ಲಿ ಒಟ್ಟು 65 ತಿರುವುಗಳಿವೆ. 3 ಕಡೆ ಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ.

Comments are closed.