ಕರಾವಳಿ

ಇನ್ನೂ ಕಗ್ಗಂಟಾಗಿಯೇ ಉಳಿದಿದೆ ಶೀರೂರು ಶ್ರೀ ಸಾವು ಪ್ರಕರಣ?

Pinterest LinkedIn Tumblr

ಉಡುಪಿ: ಶೀರೂರು ಶ್ರೀ ನಿಗೂಢ ಸಾವು ಪ್ರಕರಣದ ತನಿಖೆ ಮುಂದುವರೆದಿದೆ.ಎರಡು ದಿನಗಳ ಹಿಂದೆ ಮಣಿಪಾಲದ ಕೆಎಂಸಿ ವೈದ್ಯರು ಪೊಲೀಸರಿಗೆ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.

ಆದರೆ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಶೀರೂರು ಶ್ರೀ ಸಾವಿನ ಕಾರಣದ ಬಗೆಗೆ ಯಾವುದೇ ಸ್ಪಷ್ಟ ಉಲ್ಲೇಕವಿಲ್ಲ ಎನ್ನಲಾಗಿದೆ. ಹೀಗಾಗಿ ಸಿಸಿಟಿವಿ ಡಿವಿಆರ್ ಮೊರೆ ಹೋಗುವುದು ಪೊಲೀಸರಿಗೆ ಅನಿವಾರ್ಯ.ಸದ್ಯ ಸೈಬರ್ ವಿಭಾಗದಲ್ಲಿರುವ ಸಿಸಿಟಿವಿ ಡಿವಿಆರ್ ಗಾಗಿ ಪೊಲೀಸರು ಕಾಯುತ್ತಿದ್ದಾರೆ.ಡಿವಿಆರ್ ನಲ್ಲಿರುವ ದತ್ತಾಂಶ ಪೊಲೀಸರ ತನಿಖೆಗೆ ಆನೆಬಲ ನೀಡಲಿದೆ. ಶೀರೂರು ಮೂಲಮಠ ಮತ್ತು ರಥಬೀದಿಯ ಶೀರೂರು ಮಠದಲ್ಲಿ ಶೀರೂರು ಶ್ರೀಗಳು ಹತ್ತಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರು. ಇನ್ನೆರಡು ದಿನಗಳಲ್ಲಿ ಡಿವಿಆರ್ ಸಾಕ್ಷ್ಯಗಳು ಕೈಸೇರಲಿದೆ ಎನ್ನಲಾಗಿದೆ.

ಇನ್ನೊಂದೆಡೆ ತನಿಖೆಗಾಗಿ ವಶಪಡಿಸಿಕೊಂಡ ಶೀರೂರು ಶ್ರೀಗಳ ಪರಿಕರಗಳನ್ನು ಪೊಲೀಸರು ಇಂದು ಹಸ್ತಾಂತರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ದ್ವಂದ್ವಮಠವಾದ ಸೋದೆ ಮಠಕ್ಕೆ ಪರಿಕರಗಳನ್ನು ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.ಸ್ವಾಮೀಜಿಗಳ ಚಿನ್ನಾಭರಣ ,ಪೂಜಾ ಸಾಮಗ್ರಿಗಳು ಇದರಲ್ಲಿ ಸೇರಿವೆ.ತನಿಖೆಯ ಉದ್ದೇಶದಿಂದ ಪೊಲೀಸರು ಇವನ್ನೆಲ್ಲ ವಶಕ್ಕೆ ಪಡೆದಿದ್ದರು.

ಆದರೆ ಶೀರೂರು ಮೂಲಮಠ ಮತ್ತು ರಥಬೀದಿಯಲ್ಲಿರುವ ಮಠ ಇನ್ನೂ ಪೊಲೀಸರ ಸುಪರ್ದಿಯಲ್ಲೇ ಇದೆ.

Comments are closed.