
ಮಂಗಳೂರು : ಕಾರ್ಪೊರೇಷನ್ ಬ್ಯಾಂಕ್ ನೌಕರರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಭಾರತೀಯ ಮಜ್ದೂರ್ ಸಂಘದ ಎಂಟನೇ ಅಖಿಲ ಭಾರತೀಯ ಸಮ್ಮೇಳನವನ್ನು ದೀಪ ಪ್ರಜ್ವಲಿಸುವ ಮೂಲಕ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು, ಭಾರತೀಯ ಮಜ್ದೂರ್ ಸಂಘ ಕಾರ್ಮಿಕ ಶಕ್ತಿಯ ದ್ಯೋತಕವಾಗಿದೆ. ಕಾರ್ಮಿಕರ ಹಲವಾರು ಸಮಸ್ಯೆಗಳಿಗೆ ಧ್ವನಿಯಾಗಿ ನಿಂತು ನ್ಯಾಯ ದೊರಕಿಸಿಕೊಟ್ಟಿದೆ. ಬೀಜವೊಂದು ಮಣ್ಣಿನಡಿ ಬಿದ್ದು ಗಿಡವಾಗಿ ಈಗ ಮರದಂತೆ ಬೆಳೆದು ನಿಂತಿದೆ. ತನ್ನ ಬಲಾಢ್ಯ ಬೇರುಗಳನ್ನು ವಿಶಾಲವಾಗಿ ಹರಡಿಕೊಂಡಿದೆ. ಈಗ ವೃಕ್ಷವೆಂಬ ಸಂಘಟನೆಗೆ ನೀರೆರೆದು ಪೋಷಿಸಿದ ಎಲ್ಲಾ ನಾಯಕರನ್ನು ನೆನೆಯಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಬ್ಯಾಂಕ್ ನೌಕರರಿಂದ ಹಿಡಿದು ಕೂಲಿ ಕಾರ್ಮಿಕರ ಸಂಘಟಿತ ಶಕ್ತಿಯಾಗಿ ನಿರ್ಮಾಣಗೊಂಡಿರುವುದು ನಿಜಕ್ಕೂ ಸಂತಸದ ವಿಚಾರ. ಭಾರತದ ಇಂದಿನ ಬೆಳವಣಿಗೆಗೆ ಬ್ಯಾಂಕುಗಳೊಂದಿಗೆ ಭಾರತೀಯ ಮಜ್ದೂರ್ ಸಂಘದಂತಹ ಕಾರ್ಮಿಕ ಸಂಘಟನೆಗಳು ಅತ್ಯವಶ್ಯ. ಜನ ಸಾಮಾನ್ಯರ ಬೇಡಿಕೆಗಳನ್ನು ಈಡೇರಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆ ಲಕ್ಷ್ಮರೆಡ್ಡಿ, ಉಪೇಂದ್ರ ಕುಮಾರ್, ಮೋಹನ್ ಕುಮ್ಟಕಾರ್, ಕೆ ವಿಶ್ವನಾಥ ಪೈ, ರಮಾನಾಥ ಆರ್ ಕಿಣಿ, ಕೆ ರಘುವೀರ್ ಕಾಮತ್ ಉಪಸ್ಥಿತರಿದ್ದರು.
Comments are closed.