ಕರಾವಳಿ

ಆಗಸ್ಟ್4: ಸಚಿವ ಖಾದರ್‌ರಿಂದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ ಉದ್ಘಾಟನೆ – ವಿಧ್ಯುಕ್ತ ಆಹ್ವಾನ ನೀಡಿದ ಸಂಘಟಕರು

Pinterest LinkedIn Tumblr

ಮಂಗಳೂರು: ಉಳ್ಳಾಲದ ಅಬ್ಬಕ್ಕ ರಾಣಿ ದೇಶದ ಸ್ವಾತಂತ್ರ್ಯಕ್ಕಾಗಿ ಮಾಡಿದ ಅಪೂರ್ವ ತ್ಯಾಗವನ್ನು ಗಮನಿಸಿ ರಾಷ್ಟ್ರ ಜಾಗೃತಿಗೆ ಪೂರಕವಾದ ಕಾರ್ಯಕ್ರಮಗಳನ್ನು ದೇಶದ ವಿವಿಧೆಡೆ ನಡೆಸುವ ಸಲುವಾಗಿ ಸ್ಥಾಪಿಸಲಾದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನವನ್ನು ಆಗಸ್ಟ್4, 2018 ರಂದು ಶನಿವಾರ ರಾಜ್ಯ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಅವರು ನಗರದ ಪುರಭವನದಲ್ಲಿ ಉದ್ಘಾಟಿಸುವರು.

ಇದೇ ಸಂದರ್ಭದಲ್ಲಿ ‘ನಮ್ಮ ಅಬ್ಬಕ್ಕ’ – ಆಷಾಢ ವೈಭವ ಎಂಬ ವಿಶೇಷ ಸಾಂಸ್ಕೃತಿಕ ವೈವಿಧ್ಯ ನಡೆಯಲಿದ್ದು ಇದರಲ್ಲಿ ಪ್ರಸಿದ್ದ ಯಕ್ಷಗಾನ ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಮತ್ತು ಬಳಗದವರಿಂದ ‘ಶ್ರೀನಿವಾಸ ಕಲ್ಯಾಣ’ ಪ್ರಸಂಗದಿಂದ ಆಯ್ದ ‘ಯಕ್ಷ ನಾಟ್ಯ ಗಾನ ಹಾಸ್ಯ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಅಲ್ಲದೆ ವಿದುಷಿ ರೇಷ್ಮಾ ಮತ್ತು ಬಳಗದಿಂದ ‘ಬನ್ನಿ ಅಬ್ಬಕ್ಕನ ನಾಡಿಗೆ’ ಶೀರ್ಷಿಕೆ ಗೀತ-ನೃತ್ಯ, ಮಾಲಿನಿ ಕೇಶವ ಪ್ರಸಾದ್ ಬಳಗದ ದೇಶ ಭಕ್ತಿ ಗಾಯನ ಹಾಗೂ ನೃತ್ಯ ಭಾರತಿ ಕದ್ರಿಯ ಗೀತಾ ಸರಳಾಯ ಮತ್ತು ವೃಂದದಿಂದ ‘ನೃತ್ಯಾರ್ಪಣ’ ಕಾರ್ಯಕ್ರಮಗಳೂ ಜರಗುವುವು.

ಸಚಿವರಿಗೆ ಆಹ್ವಾನ:

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಅವರ ನೇತೃತ್ವದಲ್ಲಿ ಮಂಗಳೂರಿನ ಪ್ರವಾಸಿ ಮಂದಿರದಲ್ಲಿ ಸಚಿವರನ್ನು ಭೇಟಿಯಾದ ಪ್ರತಿಷ್ಠಾನದ ಪದಾಧಿಕಾರಿಗಳು ಅವರಿಗೆ ವಿಧ್ಯುಕ್ತ ಆಹ್ವಾನ ನೀಡಿದರು. ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ಪರವಾಗಿ ಸಚಿವ ಖಾದರ್ ಅವರಿಗೆ ಶಾಲು, ಹೂಗುಚ್ಛ ನೀಡಿ ಅಭಿನಂದಿಸಲಾಯ್ತು.

ಕಾರ್ಯಕ್ರಮದ ಸಂಘಟಕರಾದ ಭಾಸ್ಕರ ರೈ ಕುಕ್ಕುವಳ್ಳಿ, ತೋನ್ಸೆ ಪುಷ್ಕಳಕುಮಾರ್, ಪಿ.ಡಿ.ಶೆಟ್ಟಿ, ತ್ಯಾಗಂ ಹರೇಕಳ, ನಿರ್ಮಲ್ ಕುಮಾರ್ ವೈ. ಮತ್ತು ಸುಮತಿ ಎಸ್.ಹೆಗ್ಡೆ ಉಪಸ್ಥಿತರಿದ್ದರು.

Comments are closed.