ಕರಾವಳಿ

‘ಪಟ್ಟದ ದೇವರು ಸಿಗೋ ತನಕ ಉಪವಾಸ ಮಾಡುವೆ’: ಶೀರೂರು ಶ್ರೀ ಎಸ್ಪಿಗೆ ಬರೆದಿದ್ದ ಪತ್ರ ಬಹಿರಂಗ!

Pinterest LinkedIn Tumblr

ಉಡುಪಿ: ಶಿರೂರು ಸ್ವಾಮೀಜಿ ನಿಗೂಢ ಸಾವು ಪ್ರಕರಣ ದಿನೇ ದಿನೇ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಅಷ್ಟಮಠಗಳ ಜೊತೆಗಿನ ಮನಸ್ತಾಪದ ಕುರಿತಂತೆ ಶಿರೂರು ಶ್ರೀ ಜೂನ್ 24ರಂದು ಉಡುಪಿ ಎಸ್ಪಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಜು.19ರಂದು ಶಿರೂರು ಸ್ವಾಮೀಜಿ ಮೃತಪಟ್ಟಿದ್ದರು.

ಶಿರೂರು ಮಠದ ದೇವರ ಹಸ್ತಾಂತರ ವಿಚಾರದಲ್ಲಿನ ಮನಸ್ತಾಪದ ಬಗ್ಗೆ ಶಿರೂರು ಶ್ರೀ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ ಹಾಗು ಮುಂದೆ ಅನಾಹುತ ನಡೆದರೆ ಇತರ ಮಠಾಧೀಶರೇ ಜವಾಬ್ದಾರಿ ಎಂದೂ ದೂರಲಾಗಿದೆ.

“ಅನಾರೋಗ್ಯದ ನಿಮಿತ್ತ ಶ್ರೀ ಶಿರೂರು ಮಠದ ದೇವರನ್ನು ಅದಮಾರು ಮಠದ ಕಿರಿಯ ಯತಿಗಳ ಮೂಲಕ ಶ್ರೀಕೃಷ್ಣ ಮಠದಲ್ಲಿ ಪೂಜೆಗೆ ವ್ಯವಸ್ಥೆ ಮಾಡಿದ್ದೆ. ಈಗ ನಾನು ಆರೋಗ್ಯವಂತನಾಗಿದ್ದು, ನಮ್ಮ ಮಠದ ದೇವರನ್ನು ನನಗೆ ನೀಡುತ್ತಿಲ್ಲ” ಎಂದು ಶೀರೂರು ಶ್ರೀ ಉಡುಪಿ ಎಸ್ಪಿಗೆ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ತಿಳಿಸಲಾಗಿದೆ.

“ಪಟ್ಟದ ದೇವರು ನನ್ನ ವಶಕ್ಕೆ ಸಿಗುವವರೆಗೆ ಉಪವಾಸ ವ್ರತವನ್ನು ನಡೆಸುತ್ತಿದ್ದೇನೆ. ದೇವರ ಪ್ರಸಾದ ಸ್ವೀಕರಿಸದೆ ಮುಂದೆ ಅನಾಹುತ ನಡೆದರೆ ಬಾಕಿ ಮಠಾದೀಶರೇ ಜವಾಬ್ದಾರಿ” ಎನ್ನುವುದು ಪತ್ರದಲ್ಲಿದೆ.

2018 ಜೂನ್ 24ರಂದು ಪತ್ರ ಬರೆಯಲಾಗಿದ್ದು, ಸ್ವೀಕೃತಿ ದಿನಾಂಕ 2018 ಜುಲೈ 25 ಎಂದಿದೆ.

ಎಸ್ಪಿಯಿಂದ ಸ್ಪಷ್ಟನೆ: ಉಡುಪಿ ನಗರ ಠಾಣೆಗೆ ಜೂನ್ ತಿಂಗಳಲ್ಲೇ ಈ ದೂರನ್ನು ನೀಡಲಾಗಿತ್ತು. ಆದರೆ ಇದು ಉಡುಪಿ ನಗರಠಾಣೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣಕ್ಕೆ ದೂರು ಸ್ವೀಕರಿಸಿರಲಿಲ್ಲ. ಆನಂತರ ಎಸ್ಪಿ ಕಚೇರಿಗೆ ದೂರು ನೀಡಿದ್ದರು. ಇದೀಗ ಕೆಲ ದಿನಗಳ ಮೊದಲು ಯಾರೋ ಬಂದು ಜೆರಾಕ್ಸ್ ಪ್ರತಿ ನೀಡಿ ಸ್ವೀಕೃತಿ ಮೊಹರು ಹಾಕಿಸಿಕೊಂಡು ಹೋಗಿದ್ದಾರೆ. ಎಸ್ಪಿ ಕಚೇರಿಗೆ ಬರುವ ಯಾವುದೇ ದೂರಿಗೆ ಸ್ವೀಕೃತಿ ಮೊಹರು ಹಾಕಲಾಗುತ್ತದೆ ಎಂದು ಉಡುಪಿ ಎಸ್ಪಿ ಪ್ರತಿಕ್ರಿಯಿಸಿದ್ದಾರೆ.

Comments are closed.