ಮಕ್ಕಳಲ್ಲಿ ಹೊಟ್ಟೆನೋವು ಎಂಬುದು ಸಾಮಾನ್ಯ ಖಾಯಿಲೆ.ಹಲವಾರು ಕಾರಣಗಳಿಂದ ಕಾಡುವ ಹೊಟ್ಟೆನೋವು ನಿಮ್ಮ ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಳಿಗೆ ಮಾರಕವಾಗಬಹುದು.
ಕೆಲವು ಮಕ್ಕಳಲ್ಲಿ ಹೊಟ್ಟೆನೋವಿಗೆ ಮಾನಸಿಕ ಹಿನ್ನಲೆ ಇರಬಹುದು. ತಂದೆ ತಾಯಿಯರ ನಿರ್ಲಕ್ಷ್ಯ ಮನೋಭಾವ, ಶಾಲೆ-ಮನೆಗಳಲ್ಲಿ ಭಯ ಹಾಗು ದುಗುಡದ ವಾತಾವರಣ, ಒತ್ತಾಯಪೂರ್ವಕವ್ವಾಗಿ ತಿನ್ನುಸುವುದು ಇತ್ಯಾದಿ ಮಕ್ಕಳಲ್ಲಿ ಹೊಟ್ಟೆನೋವಿನ ಮೂಲಕ ಪ್ರಕಟಗೊಳ್ಳಬಹುದು. ಇಂತಹ ಹೊಟ್ಟೆನೋವಿಗೆ ಪಾಲಕರು ಮಗುವಿನ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಸಂಯಮ ಹಾಗು ಪ್ರೀತಿಯಿಂದ ಮಗುವಿನೊಡನೆ ನಡೆದುಕೊಂಡಲ್ಲಿ ಈ ಹೊಟ್ಟೆನೋವು ಬೇಗನೆ ವಾಸಿಯಾಗಬಹುದು.
ಹೊಟ್ಟೆನೋವು ಬರಲು ಇತರ ಕಾರಣಗಳು:
ಹೊಟ್ಟೆಯಲ್ಲಿ ಜಂತು ಹುಳಗಳಾಗಿದ್ದಾಗಲೂ ಹೊಟ್ಟೆನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಜಂತುಹುಳುವಿನ ಔಷಧ ನೀಡಿ ೬ ತಿಂಗಳುಗಳಿಗಿಂತ ಹೆಚ್ಚಾಗಿದ್ದಲ್ಲಿ ವೈದ್ಯರ ಸಲಹೆ ಪಡೆದು ಔಷದಿ ನೀಡುವುದು ಉತ್ತಮ.ವಾಂತಿ, ಭೇದಿ ಆಮಶಂಕೆಗಳಿದ್ದಾಗ ಹೊಟ್ಟೆನೋವು ಸಹಜವಾಗಿ ಕಂಡುಬರುತ್ತದೆ.ಬಲಭಾಗದ ಮೇಲ್ಭಾಗದಲ್ಲಿ ಹೊಟ್ಟೆನೋವು ಕಂಡು ಬಂದು, ಹಸಿವು ಒಮ್ಮೆಲೇ ಕಡಿಮೆಯಾಗಿ, ಮಗುವಿಗೆ ವಾಂತಿಯಾಗಿ ಮೂತ್ರವು ದಟ್ಟ ಹಳದಿ ಬಣ್ಣದಲ್ಲಿದ್ದಲ್ಲಿ ಕಾಮಾಲೆಯ ರೋಗ ಲಕ್ಷಣವಾಗಿರಬಹುದು.
ಹೊಟ್ಟೆನೋವು ಕೆಲ ನಿಮಿಷಗಳ ಕಾಲ ಮಾತ್ರವಿದ್ದು ಮಗುವಿನ ಆಟ, ಪಾಠ, ಚಟುವಟಿಕೆ, ಬೆಳವಣಿಗೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲದಿದ್ದರೆ ಅಂತಹ ಹೊಟ್ಟೆನೋವನ್ನು ನಿರ್ಲಕ್ಷಿಸಬಹುದು.
ಹೊಟ್ಟೆನೋವಿಗೆ ಈಗಾಗಲೇ ತಿಳಿಸಿದಂತೆ ಯಾವುದೇ ಮಾನಸಿಕ ಕಾರಣಗಳಿದ್ದಲ್ಲಿ ಪಾಲಕರು ಇದರತ್ತ ಸೂಕ್ತ ಹಾಗು ತೀವ್ರ ಗಮನ ನೀಡಬೇಕು.
ಹೊಟ್ಟೆನೋವಿನ ಜೊತೆಗೆ ಮಗುವಿಗೆ ವಾಂತಿಯಾಗುತ್ತಿದ್ದರೆ, ಮಗು ಸುಮಾರು ಸಮಯದಿಂದ ಮಲವಿಸರ್ಜನೆ ಮಾಡದಿದ್ದರೆ, ಹೊಟ್ಟೆ ಊದಿಕೊಂಡಿದ್ದರೆ, ಬಿಳುಚಿಕೊಂಡಂತೆ ಕಂಡುಬಂದರೆ ಮಗುವನ್ನು ತ್ವರಿತ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು.
ಒಮ್ಮೆಲೇ ತೀವ್ರ ಹೊಟ್ಟೆನೋವು ಬಲಭಾಗದ ಕೆಳಹೊಟ್ಟೆಯಲ್ಲಿ ಕಂಡುಬಂದು ವಾಂತಿಹಾಗು ಜ್ವರವಿದ್ದರೆ ಅಪೆಂಡಿಸೈಟಿಸ್ ಆಗಿರಬಹುದು.
ಮಗುವಿಗೆ ವಾಂತಿ ಭೇದಿಯೊಂದಿಗೆ ಹೊಟ್ಟೆನೋವು ಕಾಣಿಸಿಕೊಂಡಲ್ಲಿ ಕರುಳಿನ ಸೋಂಕು ಉಂಟಾಗಿರಬಹುದು.
ಇದರಿಂದ ಮಕ್ಕಳು ಹೊಟ್ಟೆನೋವು ಎಂದಾಗ ಅಲಕ್ಷ್ಯ ತೋರದೆ ಅವರ ಮೇಲೆ ನಿಗಾ ವಹಿಸಿ. ತ್ವರಿತ ಪ್ರಥಮ ಚಿಕಿತ್ಸೆಗಳಿಂದ ಹೊಟ್ಟೆನೋವು ಉಲ್ಬಣಿಸದಂತೆ ಮಾರಕವಾಗದಂತೆ ತಡೆಗಟ್ಟಬಹುದು.

Comments are closed.