ಕರಾವಳಿ

ಕರಾವಳಿ ಜಿಲ್ಲೆಯಾದ್ಯಂತ ನಾಳೆ “ದಗಲ್‌ಬಾಜಿಲು” ತುಳು ಚಿತ್ರ ಬಿಡುಗಡೆ

Pinterest LinkedIn Tumblr

ಮಂಗಳೂರು : ಅನುಗ್ರಹ ಫಿಲಂಸ್ ಲಾಂಛನದಲ್ಲಿ ಸಂತೋಷ್ ಶೆಟ್ಟಿ ಕುಂಬ್ಳೆ ನಿರ್ಮಾಣದ ಪ್ರಶಾಂತ್ ಆಚಾರ್ಯ ನಿರ್ದೇಶನದ ದಗಲ್‌ಬಾಜಿಲು ತುಳು ಹಾಸ್ಯ ಸಿನಿಮಾ ಜುಲೈ 20ರಿಂದ ಕರಾವಳಿ ಜಿಲ್ಲೆಯಾದ್ಯಂತ 14 ಟಾಕೀಸ್‌ಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಪ್ರಶಾಂತ್ ಆಚಾರ್ಯ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು,ಮಂಗಳೂರಿನಲ್ಲಿ ಜ್ಯೋತಿ, ಪಿವಿ‌ಆರ್, ಭಾರತ್ ಸಿನಿಮಾಸ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನಾ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಮೂಡಬಿದ್ರೆಯಲ್ಲಿ ಅಮರಶ್ರೀ, ಸುಳ್ಯದಲ್ಲಿ ಸಂತೋಷ್, ಸುರತ್ಕಲ್‌ನಲ್ಲಿ ನಟರಾಜ್, ಬೈಂದೂರಿನಲ್ಲಿ ಶಂಕರ್ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದರು.

ಚಿತ್ರದಲ್ಲಿ ನಾಯಕನಾಗಿ ನವನಟ ವಿಘ್ನೇಶ್ ಹಾಗೂ ನಾಯಕಿಯರಾಗಿ ರಶ್ಮಿಕಾ ನಟಿಸಿದ್ದಾರೆ. ಚಿತ್ರದಲ್ಲಿ ಎರಡನೇಯ ನಾಯಕಿಯಾಗಿ ಪ್ರಿಯಾ ಹೆಗ್ಡೆ ನಟಿಸಿದ್ದಾರೆ, ಉಳಿದಂತೆ ನವೀನ್ ನವೀನ್ ಡಿ ಪಡೀಲ್ , ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ದೀಪಕ್ ರೈ , ಸತೀಶ್ ಬಂದಲೆ, ಉಮೇಶ್ ಮಿಜಾರು , ತಿಮ್ಮಪ್ಪ ಕುಲಾಲ್, ಸುನೀಲ್ ನೆಲ್ಲಿಗುಡ್ಡೆ , ಪ್ರಕಾಶ್ ತೂಮಿನಾಡು , ಮನೋಹರ್ ಶೆಟ್ಟಿ ನಂದಳಿಕೆ , ಮಣಿ ಕೋಟೆಬಾಗಿಲು, ಚಂದ್ರಶೇಖರ್ ಸಿದ್ದಕಟ್ಟೆ ವಿಜಯ ಮೈಯ್ಯ, ನೀಮಾರೇ, ರೂಪಾ ವರ್ಕಾಡಿ, ನಮಿತಾ ಮುಂತಾದವರು ನಟಿಸಿದ್ದಾರೆ. ಚಿತ್ರದ ಚತ್ರೀಕರಣವು ಮೂಡಬಿದ್ರೆ, ಮಂಗಳೂರು, ಉಡುಪಿ, ಮಣಿಪಾಲದ ಸುತ್ತ ಮುತ್ತ ಸತತ ೩೫ ದಿನಗಳಲ್ಲಿ ಭರದಿಂದ ಚಿತ್ರೀಕರಣಗೊಂಡಿದೆ. ನಿರ್ಮಾಣ ನಿರ್ವಹಣೆ ಕೆಲಸವನ್ನು ಸತೀಶ್ ಬ್ರಹ್ಮಾವರ ನಿರ್ವಹಿಸಿದ್ದಾರೆ ಎಂದು ಪ್ರಶಾಂತ್ ಆಚಾರ್ಯ ವಿವರಿಸಿದರು.

ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ಬರೆದ ಸುರೇಶ್ ಅಂಚನ್ ಮೂಡಬಿದಿರೆ ಅವರು ಮಾತನಾಡಿ, ವಾಸ್ತವಿಕವಾಗಿ ನಮ್ಮ ನಡುವೆ ಪ್ರತಿಯೊಬ್ಬರು ಸ್ವಾರ್ಥ, ದ್ವೇಷ , ಅಸೂಯೆ, ಮತ್ಸರದ ನಿಲುವಿನಡಿಯಲ್ಲಿ ಒಂದಲ್ಲ ಒಂದು ವಿಷಯಕ್ಕೆ ರಕ್ತ ಸಂಬಂಧಿ ಕರಿಂದ, ಗೆಳೆಯರಿಂದ, ಮತ್ತಿತರಿಂದ ಮೋಸ, ವಂಚನೆಗೆ ಒಳಗಾದವರೇ ಇರುವುದು. ಈ ಒಂದು ಕಥೆಯ ತಿರುಳನ್ನು ಹಿಡಿದು ದಗಲ್ ಬಾಜಿಲು ಎಂಬ ತುಳು ಚಿತ್ರ ಶೇ.65% ಸಂಪೂರ್ಣ ಕಾಮಿಡಿ ಮತ್ತು ಮನೋರಂಜನೆ ಶೇ. 35% ಮನುಷ್ಯನ ಭಾವನಾತ್ಮಕ ಸಂಬಂಧಗಳ ಪ್ರೀತಿಯ ಸುತ್ತ ಇರುವ ಕಥೆಯನ್ನು ಒಳಗೊಂಡಿದೆ ಎಂದು ಚಿತ್ರದ ಬಗ್ಗೆ ತಿಳಿಸಿದರು.

ತಿಳಿದೋ ತಿಳಿಯದೆಯೋ ಮೋಸಕ್ಕೆ ಒಳಗಾಗುವರು ಇರೊವರೆಗೂ ಮೋಸ ಮಾಡುವ ಜನರು ನಮ್ಮ ಜೊತೆ ಹುಟ್ಟುತ್ತಲೇ ಇರುತ್ತಾರೆ. ದಗಲ್ ಬಾಜಿಲು ಚಿತ್ರದಲ್ಲಿ ಮೋಸ ವಂಚನೆ ಸಂಘರ್ಷ ಹಾಗೂ ಸಾಂಸರಿಕ ಜಂಜಾಟಗನ್ನು ಪ್ರತಿಬಿಂಬಿಸುವ ಸನ್ನಿವೇಶಗಳು ಅನಾವರಣಗೊಂಡಿದೆ. ಪ್ರತಿಯೊಬ್ಬರು ಚಿತ್ರವನ್ನು ನೋಡಿ ತಮ್ಮಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು . ಇದೊಂದು ಉತ್ತಮ ಮಾರ್ಗದರ್ಶಕ ಚಿತ್ರವಾಗಿದೆ ಎಂದು ಸುರೇಶ್ ಅಂಚನ್ ಹೇಳಿದರು.

ಇತ್ತೀಚಿಗೆ ತೆರೆಕಂಡು ಶತದಿನ ಆಚರಿಸಿದ ತುಳು ಚಿತ್ರವೊಂದರಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಚಿತ್ರದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸಿದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ನಟ ಅರವಿಂದ್ ಬೋಳಾರ ಅವರಲ್ಲಿ ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರವಿಂದ ಬೋಳಾರ್ ಅವರು, ಚಿತ್ರ ಚೆನ್ನಾಗಿದ್ದರೆ ಹತ್ತಾರು ಜನರಲ್ಲಿ ಹೇಳಲಿ.ಚಿತ್ರ ಉತ್ತಮವಿಲ್ಲದಿದ್ದರೆ ಅಥವಾ ಚಿತ್ರದ ಬಗ್ಗೆ ಏನಾದರೂ ಅಕ್ಷೇಪಣೆ ಇದ್ದರೆ ನೇರವಾಗಿ ನಿರ್ದೇಶಕರಲ್ಲಿ ಹೇಳಲಿ. ಆದರೆ ತುಳು ಚಿತ್ರರಂಗದ ಬಗ್ಗೆ ಅಪಪ್ರಚಾರ ಮಾಡಿ ತುಳು ಇಂಡಸ್ಟ್ರಿಯನ್ನು ಹಾಳು ಮಾಡುವ ಪ್ರಯತ್ನ ಬೇಡ ಎಂದು ಹೇಳಿದರು.

ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯವನ್ನು ಸುರೇಶ್ ಅಂಚನ್ ರಚಿಸಿದ್ದಾರೆ. ಖ್ಯಾತ ನಿರ್ದೇಶಕ ಎಂ.ಡಿ ಶ್ರೀಧರ್ ಗರಡಿಯಲ್ಲಿ ಪಳಗಿರುವ ಎ.ಎಸ್ ಪ್ರಶಾಂತ್ ಆಚಾರ್ಯ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಸಹ-ನಿರ್ದೇಶನದ ಕೆಲಸವನ್ನು ಕೆ. ಜಗದೀಶ್ ರೆಡ್ಡಿ ಮಾಡಿದ್ದಾರೆ. ಕೆ.ಎಮ್. ವಿಷ್ಣುವರ್ಧನ ಕ್ಯಾಮೆರ ಕೈ ಚಳಕ ತೋರಿಸಿದ್ದಾರೆ. ಶ್ರೀನಿವಾಸ್ ಪಿ ಬಾಬು ಸಂಕಲನ ಮಾಡಿದ್ದಾರೆ. ಕಲಾ ನಿರ್ದೇಶನವನ್ನು ವಿಲ್ಟ್ರೇಡ್ ಪಿಂಟೋ ಮಾಡಿದ್ದಾರೆ. ಹಾಗೂ ಗಾಯಕ ಆರ್.ಡಿ ಮರ್ಮನ್ ಮತ್ತು ಸಂದೇಶ್ ಬಾಬು ಜೊತೆಗೂಡಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಎಸ್ ಪಿ ಚಂದ್ರಕಾಂತ್‌ರವರು ಮಾಡಿದ್ದಾರೆ. ಚಿತ್ರದಲ್ಲಿ ಒಟ್ಟು ೬ ಹಾಡುಗಳಿವೆ. ಹಾಡುಗಳನ್ನು ಖ್ಯಾತ ಗಾಯಕರುಗಳಾದ ರಾಜೇಶ್ ಕೃಷ್ಣನ್ , ಅನುರಾಧಾ ಭಟ್, ಯಕ್ಷಧ್ರುವ ಸತೀಶ್ ಪಟ್ಲ , ವಿಸ್ಮಯ ವಿನಾಯಕ್, ಉಮೇಶ್ ಮಿಜಾರ್, ನವೀನ್ ಡಿ ಪಡೀಲ್, ಪ್ರಕಾಶ್ ಮಹಾದೇವನ್ , ರೂಪಾ ಪ್ರಕಾಶ್ , ಮಹಮ್ಮದ್ ಇಕ್ಬಾಲ್, ಧನಂಜಯ ವರ್ಮ, ಸಂದೇಶ್ ಬಾಬುರವರು ಹಾಡಿದ್ದಾರೆ.

 

ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಸಂತೋಷ್ ಶೆಟ್ಟಿ ಕುಂಬ್ಳೆ, ಸಹನಿರ್ಮಾಪರಾದ ಪ್ರಶಾಂತ್ ಶೆಟ್ಟಿ, ಆಕಾಶ್ ಭವನ, ಬಿ.ಎಸ್. ಮಂಜನಾಡಿ, ನಟಿ ಪ್ರಿಯಾ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ ಹಾಗೂ ವರದಿ : ಸತೀಶ್ ಕಾಪಿಕಾಡ್ / Mob:9035089084

Comments are closed.