ಕರಾವಳಿ

ಕರ್ನಾಟಕ ಸಂಘ ಅಂಧೇರಿಯ 12ನೇ ವಾರ್ಷಿಕೋತ್ಸವ : ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಹಾಗೂ ಡಾ| ಎಲ್‌. ಹನುಮಂತಯ್ಯರಿಗೆ ಸನ್ಮಾನ

Pinterest LinkedIn Tumblr

ಮುಂಬಯಿ :ಕರ್ನಾಟಕ ಸಂಘ ಅಂಧೇರಿ ಇದರ 12ನೇ ವಾರ್ಷಿಕೋತ್ಸವ ಸಂಭ್ರಮವು ಇತ್ತೀಚಿಗೆ ಕುರ್ಲಾ ಪೂರ್ವದ ಬಂಟರ ಭವನದ ಸಭಾಗೃಹದಲ್ಲಿ ಜರಗಿತು.

ವಾರ್ಷಿಕೋತ್ಸವದ ನಿಮಿತ್ತ ನಡೆದ ವಿವಿಧ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಾಬಾಸ್‌ ಗ್ರೂಪ್‌ ಆಫ್‌ ಕಂಪೆನೀಸ್‌ ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮಹೇಶ್‌ ಎಸ್‌. ಶೆಟ್ಟಿ ಅವರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಮಂಗಳೂರು ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರ ಕುಮಾರ್‌ ಮತ್ತು ರಾಜ್ಯ ಸಭಾ ಸದಸ್ಯ ಡಾ| ಎಲ್‌. ಹನುಮಂತಯ್ಯ ಮುಂಬಯಿ ತುಳು ಕನ್ನಡಿಗರ ಪರವಾಗಿ ಸನ್ಮಾನಿಸಲಾಯಿತು. ಪಿಎಚ್‌ಡಿ ಪದವೀದರ ಡಾ| ರಘುರಾಮ್‌ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಜನಪ್ರಿಯ ಜ್ಯೋತಿಷ್ಯ ಡಾ| ಎಂ. ಜೆ. ಪ್ರವೀಣ್‌ ಭಟ್‌, ಕರ್ನಾಟಕದ ಸಚಿವರಾದ ರಮೇಶ್‌ ಜಿಗಜಿಣಗಿ ಮತ್ತು ಆರ್‌. ಶಂಕರ್‌, ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಸಮಾಜ ಸೇವಕಿ ಡಾ| ಕೊತ್ತಕೃಷ್ಣವೇಣಿ, ಗಡಿನಾಡು ಸಾಹಿತ್ಯ ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ, ಉದ್ಯಮಿ ನಿಲೇಶ್‌ ಶೆಟ್ಟಿಗಾರ್‌, ಕ್ರಿಸ್ಟಲ್‌ ತಾಯ್‌ಸ್ಪಾ ಇದರ ಸುನೀಲ್‌ ಕುಂದರ್‌, ಸಾಕಿನಾಕಾ ಭ್ರಮರಾಂಬಿಕಾ ದೇವಸ್ಥಾನದ ಉಪಾಧ್ಯಕ್ಷ, ರಾಮಕ್ಷತ್ರೀಯ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ಶ್ರೀಧರ ಶೇರುಗಾರ್‌, ಸಾಕಿನಾಕಾ ಶಾರದಾ ಕನ್ನಡ ಹೈಸ್ಕೂಲ್‌ನ ಪ್ರಾಂಶುಪಾಲೆ ವನಿತಾ ಕುಮಾರ್‌, ಉದ್ಯಮಿ ವಿಶ್ವನಾಥ ಶೇರುಗಾರ್‌ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಸದಸ್ಯರಿಂದ ಹಾಗೂ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ವಿವಿಧ ಸಂಘ-ಸಂಸ್ಥೆಗಳು, ಭಜನಾ ಮಂಡಳಿಗಳಿಂದ ಭಜನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಪತ್ರಕರ್ತ ದಯಾ ಸಾಗರ್‌ ಚೌಟ, ಕರ್ನೂರು ಮೋಹನ್‌ ರೈ, ರಾಜ್‌ಕುಮಾರ್‌ ಕಾರ್ನಾಡ್‌ ಇವರು ನಿರ್ವಹಿಸಿದರು.

ಸಮಾರೋಪ ಸಮಾರಂಭ :

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯ ಶ್ರೀಕಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಸಮಾಜ ಸೇವೆಗೈದು ತೆರೆಮರೆಯಲ್ಲಿರುವ ಸಾಧಕರನ್ನು ಗುರುತಿಸುವ ವಿಶೇಷ ಕಾರ್ಯವನ್ನು ಸಂಘವು ಮಾಡಿದೆ. ಈ ಸಂಘಟನೆಗೆ ಉತ್ತಮ ಭವಿಷ್ಯವಿದ್ದು, ಇದರ ಸಮಾಜಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದ ಸಂಸ್ಥಾಪಕ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರು ಆಶೀರ್ವಚನಗೈದರು.

ಅತಿಥಿಗಳಾಗಿ ಕ್ಲಾಸಿಕ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ನ ಸುರೇಶ್‌ ಕಾಂಚನ್‌, ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಜೆರಿಮೆರಿ ಶ್ರೀ ಉಮಾಮಹೇಶ್ವರಿ ಮಂದಿರದ ಎಸ್‌. ಎನ್‌. ಉಡುಪ, ಉದ್ಯಮಿಗಳಾದ ಮಂಜುನಾಥ ಶೆಟ್ಟಿ, ನಾಗರಾಜ್‌ ಪಡುಕೋಣೆ, ಉದ್ಯಮಿ ಸುಭಾಷ್‌ ಶೆಟ್ಟಿ, ಪ್ರವೀಣ್‌ ಶೆಟ್ಟಿ ಪುಣೆ, ಬಿ. ಗಣಪತಿ, ಸುರೇಶ್‌ ಶೆಟ್ಟಿ, ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ರಾಮಚಂದ್ರ ಗಾಣಿಗ, ಸುಗಮ ಸಂಗೀತ ಪರಿಷತ್‌ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಾಪು ಅವರು ಶುಭಹಾರೈಸಿದರು.

ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಸ್ಥಾಪಕ ದೇವರಾಯ ಶೇರುಗಾರ್‌ ಅವರನ್ನು ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾಸ್ಕರ ಸಸಿಹಿತ್ಲು ನಿರ್ವಹಿಸಿದರು.

ವೇದಿಕೆಯಲ್ಲಿ ಸಂಸ್ಥಾಪಕಾಧ್ಯಕ್ಷ ಕೃಷ್ಣ ಶೆಟ್ಟಿ, ಗೌರವಾಧ್ಯಕ್ಷ ಪಿ. ಧನಂಜಯ ಶೆಟ್ಟಿ, ಅಧ್ಯಕ್ಷ ಹ್ಯಾರಿ ಸಿಕ್ವೇರ, ಉಪಾಧ್ಯಕ್ಷರುಗಳಾದ ರವೀಂದ್ರ ಶೆಟ್ಟಿ ಮತ್ತು ಸತೀಶ್‌ ಕರ್ಕೇರ, ಗೌರವ ಪ್ರಧಾನ ಕಾರ್ಯ ದರ್ಶಿ ರಾಜೇಂದ್ರ ರಾವ್‌, ಜತೆ ಕಾರ್ಯದರ್ಶಿ ದಿನೇಶ್‌ ಆರ್‌. ಕೆ., ಗೌರವ ಕೋಶಾಧಿಕಾರಿ ಗಣೇಶ್‌ ಬಲ್ಯಾಯ, ಜತೆ ಕೋಶಾಧಿಕಾರಿ ಸೀತಾರಾಮ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಡೆದ ಕುಣಿತ ಭಜನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸಸಿಹಿತ್ಲು ಕದಿಕೆ ಶ್ರೀ ರಾಧಾಕೃಷ್ಣ ಭಜನ ಮಂಡಳಿ, ದ್ವಿತೀಯ ಕುಂದಾಪುರ ಬಟ್ಟೆಕುದ್ರು ಶ್ರೀರಾಮ ಭಜನ ಮಂಡಳಿ, ತೃತೀಯ ಉಮಾಮಹೇಶ್ವರಿ ದೇವಸ್ಥಾನ ಜೆರಿಮೆರಿ ಭಜನ ಮಂಡಳಿ ಪಡೆಯಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ವರದಿ : ಈಶ್ವರ ಎಂ. ಐಲ್  / ಚಿತ್ರ : ದಿನೇಶ್ ಕುಲಾಲ್

Comments are closed.