ಕರಾವಳಿ

ಪಿಲಿಕುಳ ಮತ್ಸೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಹರಿದು ಬಂದ ಜನಸಾಗಾರ

Pinterest LinkedIn Tumblr

ಮಂಗಳೂರು, ಜುಲೈ.16 : ‘ಮಂಗಳೂರು ಮತ್ಸ್ಯೋದ್ಯಮಕ್ಕೆ ಪ್ರಸಿದ್ಧಿಯಾಗಿದೆ. ಇಲ್ಲಿ ಮತ್ಸೋದ್ಯಮ ಬೆಳೆಸಲು ವಿಪುಲ ಅವಕಾಶವಿದೆ. ಪಿಲಿಕುಳದಲ್ಲಿ ನಡೆಯುವ ಮತ್ಸ್ಯೋತ್ಸವಕ್ಕೆ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದು ಪಿಲಿಕುಳದ ಪ್ರಸಿದ್ಧಿಗೆ ಸಾಕ್ಷಿಯಾಗಿದೆ’ ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ರಾಜ್ಯ ಮೀನುಗಾರಿಕಾ ಇಲಾಖೆ ಮತ್ತು ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‌ನಲ್ಲಿ ನಿನ್ನೆ ಪಿಲಿಕುಳ ಮತ್ಸೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಕ ಜಿಪಂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯುಪಿ ಇಬ್ರಾಹಿಂ ಮಾತನಾಡಿ, ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಪಿಲಿಕುಳದಲ್ಲಿ ಇಂತಹ ಕಾರ್ಯಕ್ರಮಗಳು ಅಧಿಕ ಸಂಖ್ಯೆಯಲ್ಲಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಒಳನಾಡು ಮೀನು ಸಾಗಾಣಿಕೆ ತಜ್ಞ ಡಾ.ಎಂ.ಎಸ್. ನಝೀರ್, ಕೆಎಫ್‌ಡಿಸಿ ನಿರ್ದೇಶಕ ಎಂಎಲ್ ದೊಡ್ಮನಿ, ದ.ಕ.ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್, ಮೀನುಗಾರಿಕ ಇಲಾಖೆ ಉಪನಿರ್ದೇಶಕ ಮಹೇಶ್ ಕುಮಾರ್, ಸಹಾಯಕ ನಿರ್ದೇಶಕಿ ಸುಶ್ಮಿತಾರಾವ್, ಮೀನು ಮರಿ ಉತ್ಪಾದಕ ಖಲೀಮುಲ್ಲಾ ಖಾನ್ ಉಪಸ್ಥಿತರಿದ್ದರು.

ಹರಿದು ಬಂದ ಜನಸಾಗಾರ :

ಪಿಲಿಕುಳ ಮತ್ಸೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಆಗಮಿಸಿ ಪಾಲ್ಗೊಂಡರು. ಮತ್ಸೋತ್ಸವದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್‌ನ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಹಾಗೂ ಇತರೆ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಯಿತು.

ಅಲ್ಲದೆ ಅಲ್ಲದೆ ತಾಜಾ ಸಮುದ್ರ ಮೀನುಗಳ ಫ್ರೈ, ಫಿಶ್ ಮಸಾಲಾ, ಫಿಶ್ ಕಬಾಬ್ ಹಾಗೂ ಇನ್ನಿತರ ಮೀನಿನ ಖಾದ್ಯಗಳನ್ನು ಶುಚಿ ರುಚಿಯಾಗಿ ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡಲಾಯಿತು. ಈ ಸಂದರ್ಭ ಮೀನು ಮರಿಗಳನ್ನು ಕೆರೆಗೆ ಬಿಡುವ ಕಾರ್ಯಕ್ರಮವು ನಡೆಯಿತು. ಜೊತೆಗೆ ಅಲಂಕಾರಿಕಾ ಮೀನುಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಿತು.

Comments are closed.