ಕರಾವಳಿ

“ಇಂದ್ರಧನುಷ್” ಲಸಿಕಾ ಅಭಿಯಾನ : ಗುರಿ ಸಾಧನೆಗೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಲು ಅಪರ ಜಿಲ್ಲಾಧಿಕಾರಿ ಸೂಚನೆ

Pinterest LinkedIn Tumblr

ಮಂಗಳೂರು ಜುಲೈ 13 : ಮಕ್ಕಳು ಮತ್ತು ಗರ್ಭಿಣಿಯರು ಯಾವುದೇ ಲಸಿಕಾ ಕಾರ್ಯಕ್ರಮದಿಂದ ಹೊರಗುಳಿಯದಂತೆ 2018ರ ವೇಳೆಗೆ ಶೇಕಡ 90ರಷ್ಟು ಸಾಧನೆ ದಾಖಲಿಸಲು ಇಲಾಖೆ ಸೂಕ್ಷ್ಮ ಯೋಜನಾ ವರದಿಯನ್ನು ತಯಾರಿಸಿ ಅನುಷ್ಠಾನಕ್ಕೆ ಸಜ್ಜಾಗಿದೆ ಎಂದು ಆರ್‍ಸಿಎಚ್ ಡಾಕ್ಟರ್ ಅಶೋಕ್ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಇಂದ್ರಧನುಷ್ ನಗರ ಲಸಿಕಾ ಅಭಿಯಾನ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2018 ಜೂನ್ 16ರಿಂದ ನಾಲ್ಕು ದಿವಸಗಳವರೆಗೆ ನಡೆಯಲಿದೆ ಎಂದರು.

ಕಾರ್ಯಕ್ರಮದ ಮೊದಲನೇ ಸುತ್ತಿನ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆಯ ಚಾಲನ ಸಮಿತಿಯನ್ನುದ್ದೇಶಿಸಿ ಮಾತನಾಡಿದ ಕುಮಾರ್, ಮಹಾನಗರಪಾಲಿಕೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಎಎನ್‍ಎಮ್‍ಗಳು ಹಾಗೂ ಮೆಡಿಕಲ್ ಕಾಲೇಜುಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸಿ ನಿಗದಿತ ಗುರಿ ಸಾಧಿಸಿ ಎಂದು ಸೂಚಿಸಿದರು.

ಪೂರಕ ಜಾಗೃತಿ ಕಾರ್ಯಕ್ರಮ, ಬಹುಮಾಧ್ಯಮಗಳ ಬಳಕೆಯನ್ನು ಮಾಡಿಕೊಳ್ಳುವುದರ ಮೂಲಕ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿಕೊಳ್ಳಲು ನಿರ್ದೇಶನ ನೀಡಿದರು. ಐದು ವರ್ಷದಲ್ಲಿ ಏಳು ಬಾರಿ ಮಕ್ಕಳಿಗೆ ಲಸಿಕೆ ಹಾಕಿಸಬೇಕಿದ್ದು, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಬೇಕೆಂದರು.

ಕಾರ್ಯಕ್ರಮ ನಿರಂತರವಾಗಿ ಮೂರು ತಿಂಗಳು ನಡೆಯಲಿದ್ದು, ಎರಡನೇ ಹಂತ ಆಗಸ್ಟ್ ತಿಂಗಳಲ್ಲಿ ಹಾಗೂ ಮೂರನೇ ಹಂತದ ಕಾರ್ಯಕ್ರಮ ಸೆಪ್ಟೆಂಬರ್‍ನಲ್ಲಿ ನಡೆಯಲಿದೆ ಎಂದರು. ಡಾ ಸತೀಶ್‍ಚಂದ್ರ ಡಬ್ಲ್ಯುಎಚ್‍ಒ ಇವರು ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣವಾಗಿ ತಾಂತ್ರಿಕ ಸಹಕಾರ ನೀಡಲಿದ್ದಾರೆ. ಇದಲ್ಲದೆ ಮಹಾನಗರಪಾಲಿಕೆ ಮತ್ತು ಇಲಾಖೆ ಡಾಕ್ಟರ್‍ಗಳ ಜೊತೆ ಪ್ರಗತಿ ಪರಿಶೀಲನೆ ನಿಯಮಿತವಾಗಿ ನಡೆಸಲಾಗುವುದು ಎಂದು ಆರ್ ಸಿ ಎಚ್ ಡಾಕ್ಟರ್ ಹೇಳಿದರು.

ಇದೇ ಸಂದರ್ಭದಲ್ಲಿ ಮಲೇರಿಯಾ ನಿಯಂತ್ರಣಕ್ಕೂ ಸಹಕಾರ ಕೊಡಿ ಎಂದು ಡಾಕ್ಟರ್ ಅಶೋಕ್ ಹೇಳಿದರು. ಡಾ ಸವಿತಾ ಅಧೀಕ್ಷಕರು ಲೇಡಿಗೋಷನ್ ಹಾಗೂ ಡಾ ನವೀನ್‍ಚಂದ್ರ ಉಪಸ್ಥಿತರಿದ್ದರು.

Comments are closed.