ಕರಾವಳಿ

ಕುದಿಸಿ ಸೋಸಿ ತಣಿಸಿದ ಈ ನೀರು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸಲು ಸಹಕಾರಿ

Pinterest LinkedIn Tumblr

ನೋಡಲು ಗೋಧಿಯಂತೆಯೇ ಇರುವ ಬಾರ್ಲಿ ಅತ್ಯಂತ ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಬಾರ್ಲಿಯನ್ನು ಕೊಳೆಸಿದ ಬಳಿಕ ಬಿಯರ್ ತಯಾರಿಸಲು ಉಪಯೋಗಿಸುತ್ತಾರೆ ಎಂದಷ್ಟೇ ಹೆಚ್ಚಿನ ಜನರು ಅಂದುಕೊಡಿದ್ದಾರೆ. ಬಾರ್ಲಿಯನ್ನು ಕುದಿಸಿ ಸೋಸಿ ತಣಿಸಿದ ನೀರು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸಲು ಬಳಕೆಯಾಗುತ್ತದೆ. ಈ ಬಗ್ಗೆ ಕೆಲವು ಮಹತ್ವದ ಮಾಹಿತಿಗಳನ್ನು ನಿಮಗಾಗಿ ಇಲ್ಲಿ ನೀಡುತ್ತಿವೆ.

ಬಾರ್ಲಿ ನೀರು ತಯಾರಿಸುವುದು ಹೇಗೆ?
ಬಾರ್ಲಿ ನೀರನ್ನು ಒಂದು ಸಲಕ್ಕೆ ಮಾಡಿಯೂ ಕುಡಿಯಬಹುದು ಅಥವಾ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ತಯಾರಿಸಿ ಫ್ರಿಜ್ಜಿನಲ್ಲಿ ಶೇಖರಿಸಿಟ್ಟುಕೊಂಡು ಪ್ರತಿದಿನ ಬಳಸಲೂಬಹುದು. ಒಂದು ಸಲದ ಉಪಯೋಗಕ್ಕೆ ಒಂದು ಲೋಟ ನೀರಿಗೆ ಎರಡು ದೊಡ್ಡ ಚಮಚದಷ್ಟು ಬಾರ್ಲಿಯನ್ನು ಸೇರಿಸಿ ಕುದಿಸಿ. ಒಂದೆರಡು ನಿಮಿಷ ಕುದಿಸಿದ ಬಳಿಕ ಒಂದೆರಡು ಕಾಳುಗಳನ್ನು ಹಿಚುಕಿ ನೋಡಿ ಪೂರ್ಣವಾಗಿ ಬೆಂದಿದ್ದರೆ ಒಲೆಯಿಂದ ಇಳಿಸಿ. ಕೆಲವೊಮ್ಮೆ ಹೆಚ್ಚು ಒಣಗಿರುವ ಬಾರ್ಲಿ ಪೂರ್ಣವಾಗಿ ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಸುಮಾರು 1 ಕೆ ಜಿ ಬಾರ್ಲಿಗೆ ಎರಡು ಲೀಟರ್ ನೀರು ಸೇರಿಸಿ ಕುದಿಸಿ. ಒಂದು ವೇಳೆ ಬಾರ್ಲಿ ತುಂಬಾ ಒಣಗಿದ್ದರೆ ಮೂರು ಲೀಟರ್ ಬಳಸಿ. ಬಾರ್ಲಿ ಪೂರ್ಣವಾಗಿ ಬೆಂದ ಬಳಿಕ ಬಟ್ಟೆಯ ಮೂಲಕ ಸೋಸಿ ತಣಿಸಿ.ತಣಿದ ಬಳಿಕ ಗಾಜಿನ ಬಾಟಲಿಯಲ್ಲಿ ಶೇಖರಿಸಿ ಫ್ರಿಜ್ಜಿನಲ್ಲಿಟ್ಟುಕೊಳ್ಳಿ.ಅಗತ್ಯವಿದ್ದಂತೆ ಒಂದು ಲೋಟದಷ್ಟು ಪ್ರಮಾಣವನ್ನು ಚಿಕ್ಕ ಪಾತ್ರೆಗೆ ಬಗ್ಗಿಸಿಕೊಂಡು ಕೊಂಚ ಬಿಸಿ ಮಾಡಿ ಹಾಗೇ ಅಥವಾ ಲಿಂಬೆ, ಸಕ್ಕರೆ ಸೇರಿಸಿ ಕುಡಿಯಿರಿ.

ದಿನಕ್ಕೆ ಒಂದು ಅಥವಾ ಎರಡು ಲೋಟದಷ್ಟು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾರುಕಟ್ಟೆಯಲ್ಲಿ ಬಾರ್ಲಿ ಪಾಲಿಷ್ ಮಾಡಿರದ ಮತ್ತು ಮಾಡಿರುವ ಸ್ಥಿತಿಯಲ್ಲಿ ಸಿಗುತ್ತದೆ. ಪಾಲಿಷ್ ಮಾಡಿದ ಬಾರ್ಲಿ ಬೇಗನೇ ಬೇಯುತ್ತದೆ. ಆದರೆ ಪಾಲಿಷ್ ಮಾಡಿರದ ಬಾರ್ಲಿ ಬೇಯಲು ಕೊಂಚ ಹೆಚ್ಚಿನ ಸಮಯ ತೆಗೆದುಕೊಂಡರೂ ಅದರಲ್ಲಿ ನಾರಿನ ಪ್ರಮಾಣ ಹೆಚ್ಚಿರುತ್ತದೆ.

ದೇಹದಿಂದ ವಿಷಕಾರಿ ಅಂಶ ಹೊರಹಾಕುತ್ತದೆ:
ಬಾರ್ಲಿಯ ನೀರು ಕೊಂಚ ಅಂಟು ಅಂಟಾಗಿರಲು ಅದರಲ್ಲಿರುವ ‘beta-glucan’ ಎಂಬ ಪೋಷಕಾಂಶ ಕಾರಣವಾಗಿದೆ. ಇದು ಒಂದು ನೈಸರ್ಗಿಕವಾದ ಕರಗದ ನಾರು ಆಗಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ ಹಾಗೂ ಮೂಲವ್ಯಾಧಿಯ ಸಂಭವತೆಯನ್ನು ಕಡಿಮೆಗೊಳಿಸುತ್ತದೆ. ಜೀರ್ಣಕ್ರಿಯೆ ಸರಳಗೊಂಡು ವಿಸರ್ಜನಾ ಕ್ರಿಯೆಯನ್ನು ಸುಲಲಿತಗೊಳಿಸುತ್ತದೆ. ಇದೇ ಕಾರಣದಿಂದ ವಿಷಕಾರಿ ವಸ್ತುಗಳು ಶೀಘ್ರವಾಗಿ ದೇಹದಿಂದ ಹೊರಹೋಗುವಂತಾಗಿ ಆರೋಗ್ಯ ವೃದ್ಧಿಸುತ್ತದೆ. ಕರುಳಿನ ಕ್ಯಾನ್ಸರ್ ನ ಸಂಭವತೆಯನ್ನೂ ಕಡಿಮೆಗೊಳಿಸುತ್ತದೆ.

ಮೂತ್ರದ ಪ್ರಮಾಣ ಹೆಚ್ಚಿಸುತ್ತದೆ:
ಬಾರ್ಲಿ ಒಂದು ಉತ್ತಮ ಮೂತ್ರವರ್ಧಕವಾಗಿದ್ದು ದೇಹದಿಂದ ಮೂತ್ರದ ಮೂಲಕ ವಿಷಕಾರಿ ವಸ್ತುಗಳು ಹೊರಹೋಗಲು ಸಹಕರಿಸುತ್ತದೆ. ಬಾರ್ಲಿಯ ಸೇವನೆಯಿಂದ ದೇಹದ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗುವುದರಿಂದ ದೇಹವು ತಂಪಾಗಿರುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಖಾರವಾದ ಊಟವನ್ನು ಸೇವಿಸಿದ ಬಳಿಕ ಹೊಟ್ಟೆಯಲ್ಲಿ ಉರಿಯುಂಟಾಗುವುದನ್ನು ಬಾರ್ಲಿ ತಡೆಯುತ್ತದೆ. ಹಾಗಾಗಿ ಖಾರದ ಊಟದ ಬಳಿಕ ಬಾರ್ಲಿ ನೀರನ್ನು ಸೇವಿಸಲು ಮರೆಯದಿರಿ.

ಸಂಧಿವಾತದಿಂದ ರಕ್ಷಣೆ ನೀಡುತ್ತದೆ:
ಬಾರ್ಲಿ ಒಂದು ಅತ್ಯುತ್ತಮವಾದ ಉರಿಯೂತ ನಿವಾರಕವಾಗಿದೆ. ಇದೇ ಕಾರಣದಿಂದ ಸಂಧಿವಾತದಿಂದ ಬಳಲುತ್ತಿರುವವರು ಬಾರ್ಲಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ನಿಧಾನವಾಗಿ ಸಂಧಿವಾತದಿಂದ ಮುಕ್ತಿ ಪಡೆಯಬಹುದು.

ಮಧುಮೇಹಿಗಳಿಗೂ ಉತ್ತಮ:
ಬಾರ್ಲಿಯಲ್ಲಿರುವ ಬೀಟಾ ಗ್ಲುಕಾನ್ ಆಹಾರದಲ್ಲಿರುವ ಗ್ಲುಕೋಸ್ ಸಕ್ಕರೆಯನ್ನು ರಕ್ತದಲ್ಲಿ ಸೇರಿಸುವ ಗತಿಯನ್ನು ನಿಧಾನಗೊಳಿಸುವ ಕಾರಣ ಮಧುಮೇಹಿಗಳು ಸಹ ಸುರಕ್ಷಿತವಾಗಿ ಸೇವಿಸಬಹುದು. ಮಧುಮೇಹಿಗಳ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಪ್ರಮಾಣ ಏರಿದರೆ ಅಪಾಯಕಾರಿಯಾದುದರಿಂದ ಬಾರ್ಲಿ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆ ನಿಧಾನವಾಗಿ ಲಭ್ಯವಾಗುವಂತೆ ಮಾಡಿ ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ದಿನಕ್ಕೊಂದು ಲೋಟದ ಮೂಲಕ ದಿನದ ನಾರಿನ ಅಗತ್ಯ ಪೂರ್ಣಗೊಳ್ಳುತ್ತದೆ ಇಂದು ಮೈದಾ ಆಧಾರಿತ ಆಹಾರಗಳನ್ನು ಸೇವಿಸುವ ಮೂಲಕ ದೇಹಕ್ಕೆ ಲಭ್ಯವಾಗುವ ನಾರಿನ ಪ್ರಮಾಣ ಕಡಿಮೆಯಾಗುತ್ತದೆ. ಇದನ್ನು ಪೂರ್ಣಗೊಳಿಸಲು ದಿನಕ್ಕೊಂದು ಲೋಟ ಬಾರ್ಲಿ ನೀರನ್ನು ಕುಡಿಯುವುದು ಉತ್ತಮ.

ಕೊಲೆಸ್ಟ್ರಾಲ್ ಪ್ರಮಾಣ ಕುಗ್ಗಿಸುತ್ತದೆ:
ಬಾರ್ಲಿ ನೀರಿನಲ್ಲಿ ಹೆಚ್ಚಿನ ನಾರು ಇರುವುದರಿಂದ ಪಚನಕ್ರಿಯೆ ಮತ್ತು ರಕ್ತಸಂಚಾರ ಸುಗಮಗೊಳ್ಳುತ್ತದೆ. ಪರಿಣಾಮವಾಗಿ ರಕ್ತದಲ್ಲಿದ್ದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯಕ್ಕೆ ಹೆಚ್ಚಿನ ಒತ್ತಡ ನೀಡುವ ಅಗತ್ಯ ಕಡಿಮೆಯಾಗುತ್ತದೆ.

ಮೂತ್ರಪಿಂಡಗಳಲ್ಲಿನ ಕಲ್ಲು ಕರಗಿಸುತ್ತದೆ:
ಮೂತ್ರಪಿಂಡಗಳಲ್ಲಿ ಉತ್ಪತ್ತಿಯಾಗುವ ಕಲ್ಲುಗಳಿಗೆ ಆಹಾರದಲ್ಲಿರುವ ಲವಣಗಳು ಕಾರಣವಾಗಿವೆ. ಒಂದು ಚಿಕ್ಕ ಕಣದಿಂದ ಪ್ರಾರಂಭವಾಗುವ ಇವು ದಿನಗಳೆದಂತೆ ದೊಡ್ಡದಾಗುತ್ತಾ ಹೋಗುತ್ತವೆ. ಒಂದು ನಿರ್ದಿಷ್ಟ ಪ್ರಮಾಣಕ್ಕೆ ಬೆಳೆದ ಬಳಿಕ ನೋವು ನೀಡಲು ಪ್ರಾರಂಭವಾಗುತ್ತದೆ. ಅಲ್ಲಿಯವರೆಗೂ ಈ ಕಲ್ಲುಗಳ ಇರುವಿಕೆಯೇ ಗೊತ್ತಾಗುವುದಿಲ್ಲ. ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವುದರಿಂದ ಈ ಕಲ್ಲುಗಳು ನಿಧಾನವಾಗಿ ಕರಗುತ್ತವೆ. ಪರಿಣಾಮವಾಗಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

Comments are closed.