ಕರಾವಳಿ

ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ : ಸಂಸದ ನಳಿನ್ ಕುಮಾರ್ ಕಟೀಲು

Pinterest LinkedIn Tumblr

ಮಂಗಳೂರು, ಜುಲೈ,3: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಮತ್ತು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಿಂದಲೂ ಮಾಧ್ಯಮಗಳು ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮಗಳು ಸಮಾಜದ ಜನರನ್ನು ಒಂದುಗೂಡಿಸುವ ಸೂಕ್ತ ಮಾರ್ಗದರ್ಶನ ನೀಡುವಂತಾಗಲಿ ಎಂದು ಹೇಳಿದರು.

ಸ್ವಾತಂತ್ರ ಹೋರಾಟಗಾರರದ ಬಾಲ ಗಾಂಗಾಧರ ತಿಲಕ್ ಅವರು ಕೇಸರಿ ಪತ್ರಿಕೆ, ಮಹಾತ್ಮ ಗಾಂಧೀಜಿ ಹರಿಜನ ಪತ್ರಿಕೆಯ ಮೂಲಕ ಜನಜಾಗೃತಿಗೆ ಒತ್ತು ನೀಡಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶದ ಜನಕ್ಕೆ ಅನ್ಯಾಯವಾದಾಗಲೆಲ್ಲಾ ಪತ್ರಿಕೆಗಳು ಧ್ವನಿಯೆತ್ತಿವೆ. ಜನತೆಯನ್ನು ಹೋರಾಟದ ಹಾದಿಯಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರೇರೇಪಿಸಿವೆ. ದೇಶ ಸ್ವಾತಂತ್ರ್ಯ ಕಂಡ ಬಳಿಕವೂ ಮಾಧ್ಯಮಗಳು ಸರಿ -ತಪ್ಪುಗಳ ಬಗ್ಗೆ ತಿಳಿಸುತ್ತಾ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ನಳಿನ್ ಕುಮಾರ್ ಹೇಳಿದರು.

ಪ್ರಸಕ್ತ ಪತ್ರಿಕಾ ಮಾಧ್ಯಮದ ಜೊತೆ ಮತ್ತು ನವ ಮಾಧ್ಯಮಗಳಲ್ಲಿ ದೃಶ್ಯ ಮಾಧ್ಯಮಗಳು ಸೇರ್ಪಡೆಗೊಂಡಿವೆ. ಟಿಆರ್‌ಪಿ ಹಿಂದೆ ಓಡುವ ದೃಶ್ಯ ಮಾಧ್ಯಮಗಳು ಕೆಲವೊಮ್ಮೆ ಮಾಧ್ಯಮದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಆದರೆ ಮುದ್ರಣ ಮಾಧ್ಯಮಗಳು ಮಾತ್ರ ಇಂದಿಗೂ ಜನತೆಯ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ. ಮಾಧ್ಯಮಗಳ ಮೂಲ ಆಶಯವನ್ನು ಉಳಿಸಿಕೊಳ್ಳುವುದರೊಂದಿಗೆ ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಹೊಣೆಗಾರಿಕೆ ಮಾಧ್ಯಮಗಳ ಮೇಲಿದೆ ಎಂದು ನಳಿನ್ ಕುಮಾರ್ ಹೇಳಿದರು.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅವರು ರಚಿಸಿರುವ 48 ವರ್ಷಗಳ ತುಳು ಸಿನಿಮಾ ರಂಗದ ಕುರಿತಾದ ‘ಸಿನಿಮಾವಲೋಕನ’ ಕೃತಿಯನ್ನು ಸಂಸದರಿಗೆ ಹಸ್ತಾಂತರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು.ಕಾರ್ಯದರ್ಶಿ ಶ್ರೀನಿವಾಸ ನಾಯಕ್ ವಂದಿಸಿದರು. ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.

Comments are closed.