ಕರಾವಳಿ

ಬಿಜೆಪಿ ಮಾಡಿದ ಅಪಪ್ರಚಾರದಿಂದ ಕಾಂಗ್ರೆಸ್ ಸೋಲು: ವಿನಯಕುಮಾರ್ ಸೊರಕೆ

Pinterest LinkedIn Tumblr

ಉಡುಪಿ: ಕುಂದಾಪುರ ವಿಧಾನಸಭಾ ವ್ಯಾಪ್ತಿಯ ವಾರಾಹಿ ನೀರನ್ನು ಉಡುಪಿ ನಗರ ಸಭೆಗೆ ಒಯ್ಯುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಈ ಮಧ್ಯೆ ಹಾದುಹೋಗುವ ಶಂಕರನಾರಾಯಣ, ಹಾಲಾಡಿ,ಆವರ್ಸೆ, ಹೆಗ್ಗುಂಜೆ, ಕೊಕ್ಕರ್ಣೆ ಮುಂತಾದ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಶುದ್ಧ ಕುಡಿಯುವ ನೀರನ್ನು ನೀಡಿ ಮುಂದಕ್ಕೆ ಒಯ್ಯಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ ಮತ್ತು ಇದು ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಹೇಳಿದ್ದಾರೆ.

ಅವರು ಕುಂದಾಪುರ ಹೋಟೆಲ್ ಹರಿಪ್ರಸಾದ್‌ನ ಅಕ್ಷತಾ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ೫ ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲಲು ಬಿಜೆಪಿ ಪಕ್ಷವು ಕಾಂಗ್ರೆಸ್ ವಿರುದ್ಧ ವ್ಯವಸ್ಥಿತವಾಗಿ ನಡೆಸಿದ ಅಪಪ್ರಚಾರವೇ ಕಾರಣವಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಬಿಜೆಪಿ ಯುವಜನಾಂಗವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ನ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ಆ ಮೂಲಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರ ನಂತರ ಅತೀ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದ ಸಿದ್ಧರಾಮಯ್ಯನವರ ಸರಕಾರ ಸೋಲುವಂತಾಯಿತು. ಕಾಂಗ್ರೆಸ್ ಪಕ್ಷ ತಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಪ್ರಚಾರ ಮಾಡುವುದರಲ್ಲಿ ಸೋತಿದೆ ಎಂದು ಕಾಂಗ್ರೆಸ್ ಹಿಂದುಳಿದ ವರ್ಗ ರಾಜ್ಯ ಉಪಾಧ್ಯಕ್ಷ ಮಾಣಿಗೋಪಾಲ್ ಹೇಳಿದ್ದಾರೆ.

ಕೇಂದ್ರ ಸರಕಾರದ ಅವೈಜ್ಞಾನಿಕ ಮರಳು ನೀತಿಯಿಂದಾಗಿ ಮರಳು ಸಮಸ್ಯೆ ಉಲ್ಬಣಿಸಿದೆ. ಈಗಿಂದೀಗಲೇ ಸಮಸ್ಯೆ ಪರಿಹಾರವಾಗದಿದ್ದಲ್ಲಿ ನಾವು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ ಹಲವು ಬಾರಿ ಸೋತಿದೆ ಮತ್ತು ಪುನಃ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಅಭಿವೃದ್ದಿ ಮಂತ್ರವನ್ನು ಇಟ್ಟುಕೊಂಡು ರಾಜಕಾರಣ ಮಾಡಿದರೆ, ಬಿಜೆಪಿ ಜನರ ಮಧ್ಯೆ ಸಂಘರ್ಷ ಏರ್ಪಡಿಸಿ ಅಧಿಕಾರಕ್ಕೆ ಬರುವ ಹುನ್ನಾರವನ್ನು ಬೆಳೆಸಿಕೊಂಡಿದೆ. ಕಾಲವೇ ಎಲ್ಲದಕ್ಕೂ ಉತ್ತರಿಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ್ ತೋನ್ಸೆ ಹೇಳಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ ಭಂಡಾರಿ, ಕಾರ್ಯದರ್ಶಿ ಮುರಳಿ ಶೆಟ್ಟಿ ಇಂದ್ರಾಳಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಬಿ. ಹಿರಿಯಣ್ಣ, ಮುನಿಯಾಲು ಉದಯಕುಮಾರ್ ಶೆಟ್ಟಿ, ಕಾಂಗ್ರೆಸ್ ಸೇವಾದಳದ ಪ್ರಮುಖ ಅಶೋಕ್ ಕುಮಾರ್ ಕೊಡವೂರು ಮುಂತಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾರಾಯಣ ಆಚಾರ್ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.

Comments are closed.