ಕರಾವಳಿ

ದೈವಸ್ಥಾನದ ಕಾಂಪೊಂಡ್ ಗೋಡೆ ಕುಸಿತ; ದೈವಕ್ಕೆ ಕೈ ಮುಗಿಯಲು ಹೋದ ವಿದ್ಯಾರ್ಥಿನಿ ಸಾವು

Pinterest LinkedIn Tumblr

ಕುಂದಾಪುರ: ದೈವಸ್ಥಾನದ ಗೋಡೆ ಕುಸಿದು ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ ದಾರುಣ ಘಟನೆ ಬೈಂದೂರು ತಾಲೂಕಿನ ನಾವುಂದ ಅರೆಹೊಳೆ ಸಮೀಪದ ಹೇರೂರು ಗ್ರಾ.ಪಂ ವ್ಯಾಪ್ತಿಯ ಉಳ್ಳೂರು-11 ಎಂಬಲ್ಲಿ ನಡೆದಿದೆ. ಇಲ್ಲಿನ ಕಾಕ್ತೋಟ ಶ್ಯಾನಾಪುರ ಮನೆ ನಿವಾಸಿ ಧನ್ಯಾ ಶೆಟ್ಟಿ (22) ಮೃತ ವಿದ್ಯಾರ್ಥಿನಿ.

ಆಗಿದ್ದೇನು?
ಮಂಗಳೂರು ಕೊಣಾಜೆಯ ಮಂಗಳಗಂಗೋತ್ರಿ (ಮಂಗಳೂರು ಯುನಿವರ್ಸಿಟಿ) ಕಾಲೇಜಿನಲ್ಲಿ ಮೊದಲ ವರ್ಷದ ಎಂಎಸ್ಸಿ (ಸ್ಟಾಟ್) ವಿದ್ಯಾಭ್ಯಾಸ ಮಾಡುತ್ತಿದ್ದ ಧನ್ಯಾ ಈ ವರ್ಷದ ಪರೀಕ್ಷೆ ಬಳಿಕ ರಜೆಯಲ್ಲಿ ಕಳೆದ ಎರಡು ವಾರಗಳ ಹಿಂದೆ ತನ್ನ ಮನೆಗೆ ಮರಳಿದ್ದರು. ಮನೆ ಸಮೀಪದಲ್ಲಿನ ಜಟ್ಟಿಗೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯುವ ಪರಿಪಾಠ ಹೊಂದಿದ್ದ ಧನ್ಯಾ ಊರಿಗೆ ವಾಪಾಸ್ಸಾದ ದಿನದಿಂದಲೂ ನಿತ್ಯ ಮನೆಯ ಕೂಗಳತೆಯ ದೂರದಲ್ಲಿನ ದೈವಸ್ಥಾನಕ್ಕೆ ಬೆಳಗ್ಗೆ ತೆರಳುತ್ತಿದ್ದು ಎಂದಿನಂತೆ ಶುಕ್ರವಾರದಂದೂ ಕೂಡ ದೈವಸ್ಥಾನಕ್ಕೆ ತೆರಳುತ್ತಿದ್ದು ಈ ವೇಳೆ ಜೋರು ಮಳೆಯಿಂದಾಗಿ ಮಣ್ಣು ಸಡಿಲಗೊಂಡು ದೈವಸ್ಥಾನದ ಕಾಂಪೊಂಡ್ ಗೋಡೆ ಧನ್ಯಾಮೇಲೆರಗಿದೆ. ಗೋಡೆಯ ಕಲ್ಲು ಮಣ್ಣುಗಳಾಡಿಗೆ ಸಿಲುಕಿ ಧನ್ಯಾ ಬಾರದ ಲೋಕಕ್ಕೆ ತೆರಳಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿನಿ..
ಉಳ್ಳುರು ನಿವಾಸಿಗಳಾದ ಚಂದ್ರಶೇಖರ್ ಹಾಗೂ ಹೇಮಾ ದಂಪತಿಗಳಮೂವರು ಪುತ್ರಿಯರಲ್ಲಿ ಧನ್ಯಾ ಕಿರಿಯವಳು. ತಂದೆ ಹೈದರಬಾದಿನಲ್ಲಿ ಬೀಡಾ ಅಂಗಡಿ ನಡೆಸುತ್ತಿದ್ದಾರೆ. ಧನ್ಯಾಳಿಗೆ ಓದುವ ಹಂಬಲವೂ ಜಾಸ್ಥಿಯಾಗಿದ್ದು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿ ಬಳಿಕ ಉನ್ನತ ಶಿಕ್ಷಣಕ್ಕೆ ಮಂಗಳೂರು ಸೇರಿದ್ದರು. ಅಲ್ಲಿ ಪ್ರಥಮ ವರ್ಷದ ಶಿಕ್ಷಣ ಮುಗಿಸಿ ರಜೆಯಲ್ಲಿ ಇದೇ ತಿಂಗಳ ಮೊದಲ ವಾರ ಮನೆಗೆ ವಾಪಾಸ್ಸಾಗಿದ್ದು ಜುಲೈ ತಿಂಗಳ ಅಂತ್ಯದಲ್ಲಿ ಕಾಲೇಜು ಪುನರಾರಂಭವಾಗುವುದರಲ್ಲಿತ್ತು.

ಧನ್ಯಾ ಮನೆಯ ಸನಿಹದಲ್ಲಿರುವ ಜಟ್ಟಿಗೇಶ್ವರ ದೈವಸ್ಥಾನವು ಕಳೆದ ಜನವರಿ ತಿಂಗಳಿನಲ್ಲಿ ನವೀಕರಣಗೊಂಡಿದ್ದು ಇಲ್ಲಿಗೆ ಸುತ್ತಲೂ ಕಟ್ಟಿದ ಕಾಂಪೋಂಡ್ ಗೋಡೆ ಅಭದ್ರ ಸ್ಥಿತಿಯಲ್ಲಿತ್ತು.

ಘಟನಾ ಸ್ಥಳಕ್ಕೆ ಬೈಂದೂರು ತಹಶಿಲ್ದಾರ್, ಉಡುಪಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಬೈಂದೂರು ಪಿಎಸ್ಐ ತಿಮ್ಮೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Comments are closed.