ಕರಾವಳಿ

ನೆಲದ ಮೇಲೆ ಕುಳಿತು ಊಟ ಮಾಡುವ ವೈಜ್ಞಾನಿಕ ಪ್ರಯೋಜನ ಬಲ್ಲಿರಾ..?

Pinterest LinkedIn Tumblr


ಪುರಾತನವಾದರೂ ನಿತ್ಯ ನೂತನ ಪರಂಪರೆಯ ಆಗರವೇ ಭಾರತ. ಇಂತಹ ಒಂದು ಪುರಾತನವಾಗಿದ್ದರೂ ಇಂದಿಗೂ ಆರೋಗ್ಯವನ್ನು ಉಳಿಸಿಕೊಳ್ಳುವ ಅಭ್ಯಾಸವೇ ಯೋಗ. ವೈದಿಕ ಜ್ಞಾನ, ತರ್ಕ ಹಾಗೂ ಇನ್ನೂ ಹಲವಾರು ಪರಂಪರೆಗಳು ಆಧುನಿಕತೆಯ ಭರಾಟೆಯಲ್ಲಿ ಇಂದು ಕಳೆದೇ ಹೋಗಿವೆ. ಭಾರತೀಯ ಪರಂಪರೆಯಲ್ಲಿ ವಿವರಿಸಿದಂತೆ ನಮ್ಮ ಪೂರ್ವಜರೆಲ್ಲರೂ ನೆಲದಲ್ಲಿ ಕುಳಿತೇ ಊಟ ಮಾಡುತ್ತಿದ್ದರು. ಕೇವಲ ರಾಜಮಹಾರಾಜರಿಗೆ ಮಾತ್ರವೇ ನೆಲದಿಂದ ಕೊಂಚವೇ ಎತ್ತರವಿರುವ ಮಣೆಯನ್ನು ನೀಡಲಾಗುತ್ತಿತ್ತು. ನೆಲದ ಮೇಲೆ ಕುಳಿತು ಊಟ ಮಾಡುವ ವೈಜ್ಞಾನಿಕ ಪ್ರಯೋಜನಗಳನ್ನು ಅರಿಯೋಣ.

ಇಂದು ಮನೆಗಳು ಚಿಕ್ಕದಾದಂತೆಯೇ ಮನೆಯಲ್ಲಿ ಪಾಶ್ಚಾತ್ಯ ವಸ್ತುಗಳು ಲಗ್ಗೆಯಿಟ್ಟಿವೆ. ವಿಶೇಷವಾಗಿ ನಗರದಲ್ಲಿ ನೆಲೆಸಿರುವವರು ಪಾಶ್ಚಾತ್ಯರಂತೆಯೇ ಮೇಜಿನ ಮೇಲಿಟ್ಟ ಆಹಾರವನ್ನು ಕುರ್ಚಿಗಳ ಮೇಲೆ ಕುಳಿತು ಸೇವಿಸುತ್ತಾರೆ. ಆದರೂ ಇಂದಿಗೂ ಎಷ್ಟೋ ಮನೆಗಳಲ್ಲಿ ಹಿಂದಿನಂತೆಯೇ ನೆಲದ ಮೇಲೇ ಕುಳಿತು ಆಹಾರ ಸೇವಿಸುತ್ತಿದ್ದಾರೆ. ಆದರೆ ಕೊಂಚ ಅನಾನುಕೂಲವಾಗುವಂತೆ ಕಂಡು ಬರುವ ಈ ವಿಧಾನದಲ್ಲಿ ಹಲವಾರು ಪ್ರಯೋಜನಗಳಿವೆ ಎಂಬ ಮಾಹಿತಿ ನಿಮಗೆ ಆಶ್ಚರ್ಯ ಮೂಡಿಸಬಹುದು.. ಒಂದು ವೇಳೆ ನೀವು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುವ ಕುಟುಂಬಕ್ಕೆ ಸೇರಿದ್ದರೆ ಈ ಮಾಹಿತಿ ನಿಮ್ಮ ಇದುವರೆಗಿನ ಅರಿವನ್ನು ಬದಲಿಸಬಹುದು..

ಚಕ್ಕಲ ಮಕ್ಕಲ ಹಾಕಿ ಕುಳಿತುಕೊಳ್ಳಿ
ಊಟ ಮಾಡಲು ನೆಲದ ಮೇಲೆ ಕುಳಿತಾಗ ಚಕ್ಕಲ ಮಕ್ಕಲ ಹಾಕಿ ಕುಳಿತುಕೊಳ್ಳಬೇಕು. ಯೋಗಾಸನದಲ್ಲಿ ಇದಕ್ಕೆ ‘ಸುಖಾಸನ’ ಎಂದು ಕರೆಯುತ್ತಾರೆ. ಈ ಆಸನ ಜೀರ್ಣಕ್ರಿಯೆಗೆ ಅತ್ಯಂತ ಪೂರಕವಾದ ಆಸನವಾಗಿದೆ. ಈ ಆಸನದಲ್ಲಿ ಕುಳಿತುಕೊಳ್ಳುವ ಪ್ರಥಮ ಪ್ರಯೋಜನವೆಂದರೆ ಪ್ರತಿ ತುತ್ತನ್ನು ಬಾಯಿಗೆ ಇಟ್ಟುಕೊಳ್ಳಬೇಕಾದರೂ ಅನಿವಾರ್ಯವಾಗಿ ತಲೆಯನ್ನು ಮುಂದಕ್ಕೆ ವಾಲಿಸಬೇಕಾಗುತ್ತದೆ ಹಾಗೂ ತುತ್ತನ್ನು ಬಾಯಿಗಿಟ್ಟ ಬಳಿಕ ಹಿಂದೆ ತರಬೇಕಾಗುತ್ತದೆ. ಈ ಚಲನೆಯಿಂದ ಸೊಂಟದ ಸ್ನಾಯುಗಳಿಗೆ ಚಾಲನೆ ಸಿಕ್ಕಿದಂತಾಗುತ್ತದೆ ಹಾಗೂ ಈ ಮೂಲಕ ಜೀರ್ಣಶಕ್ತಿಯೂ ಉತ್ತಮಗೊಳ್ಳುತ್ತದೆ., ಚಕ್ಕಲ ಮಕ್ಕಲ ಹಾಕಿ ಕುಳಿತುಕೊಂಡಾಗ ನಿಮಗೆ ಲಗುಬಗನೇ ಊಟ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಊಟವನ್ನು ನಿಧಾನಗತಿಯಿಂದ ಮಾಡಬೇಕಾಗುತ್ತದೆ. ಇದರಿಂದ ಬಾಯಿಯಲ್ಲಿ ಆಹಾರವನ್ನು ಚೆನ್ನಾಗಿ ಅಗಿಯಲು ಸಾಧ್ಯವಾಗುತ್ತದೆ. ಅಲ್ಲದೇ ಕೊಂಚವೇ ಸಮಯದಲ್ಲಿ ಹೊಟ್ಟೆ ತುಂಬಿದ ಅನುಭವವಾಗುತ್ತದೆ.

ಇದಕ್ಕೇ ಕುರ್ಚಿ ಬಿಟ್ಟು ನೆಲದ ಮೇಲೆ ಕುಳಿತುಕೊಳ್ಳಿ..
. ಹೊಟ್ಟೆಗೆ ಸಾಕಷ್ಟು ಸಿಕ್ಕಿದೆ, ಇನ್ನು ಸಾಕು ಎಂದು ಹೊಟ್ಟೆಯಿಂದ ಮೆದುಳಿಗೆ ರವಾನೆಯಾಗುವ ಸೂಚನೆ ಈ ಭಂಗಿಯಲ್ಲಿದ್ದಾಗ ಸೂಕ್ತ ಸಮಯದಲ್ಲಿ ರವಾನೆಯಾಗುತ್ತದೆ. ತನ್ಮೂಲಕ ಅನಗತ್ಯವಾಗಿ ಹೊಟ್ಟೆಗೆ ಹೆಚ್ಚುವರಿ ಆಹಾರ ಸೇವಿಸುವುದರನ್ನು ತಡೆದಂತಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕುರ್ಚಿಯ ಮೇಲೆ ಕುಳಿತಾಗ ಈ ಸೂಚನೆ ಕೊಂಚ ತಡವಾಗಿ ರವಾನೆಯಾಗುತ್ತದೆ. ಇದು ಸ್ಥೂಲಕಾಯಕ್ಕೆ ಮೂಲ ಕಾರಣವಾಗಿದೆ. ಬೆನ್ನಿನ ಕೆಳಭಾಗದ ಸ್ನಾಯುಗಳಿಗೆ ಒಳ್ಳೆಯದು… ಈ ಭಂಗಿಯಲ್ಲಿ ಕುಳಿತಾಗ ಬೆನ್ನಿನ ಕೆಳಭಾಗದ ಸ್ನಾಯು, ಹೊಟ್ಟೆ, ಜಠರ ಕುಹರ ಹಾಗೂ ಸೊಂಟದ ಸ್ನಾಯುಗಳಿಗೆ ಅತಿ ಹೆಚ್ಚಿನ ಸೆಳೆತ ಸಿಗುತ್ತದೆ. ಇದರಿಂದ ಜೀರ್ಣಾಂಗಗಳಿಗೆ ನಿರಾಳವಾಗಿ ಕೆಲಸ ಮಾಡಲು ಹೆಚ್ಚಿನ ಸ್ಥಳಾವಕಾಶ ದೊರೆಯುತ್ತದೆ. ಇದರಿಂದ ಜೀರ್ಣಾಂಗಗಳ ಆರೋಗ್ಯವೂ ವೃದ್ಧಿಸುತ್ತದೆ.

ಲವಲವಿಕೆಯ ಆರೋಗ್ಯಕ್ಕಾಗಿ…
ಬೆನ್ನನ್ನು ತಾಗಿಸಲು ಹಿಂದೆ ಗೋಡೆ ಅಥವಾ ಬೇರಾವುದೇ ಆಧಾರವಿಲ್ಲದ ಕಾರಣ ಬೆನ್ನನ್ನು ನೆಟ್ಟಗಿರಿಸಲು ಬೆನ್ನಿನ ಹಾಗೂ ಸೊಂಟದ ಸ್ನಾಯುಗಳು ಅನಿವಾರ್ಯವಾಗಿ ತಮ್ಮ ಪೂರ್ಣಸಾಮರ್ಥ್ಯದಿಂದ ಹಿಡಿದಿಡಬೇಕಾಗುತ್ತದೆ. ಇದು ಸೊಂಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ತನ್ಮೂಲಕ ನಡೆದಾಡಲು, ಬಗ್ಗಲು ಹೆಚ್ಚಿನ ಸಾಮರ್ಥ ಪಡೆದು ವೃದ್ಧಾಪ್ಯದಲ್ಲಿಯೂ ಗಟ್ಟಿಮುಟ್ಟಾಗಿರಲು ನೆರವಾಗುತ್ತದೆ.

ಚಕ್ಕಲ ಮಕ್ಕಲ ಹಾಕಿ ಕುಳಿತ ಭಂಗಿಯಲ್ಲಿ ಹೃದಯಕ್ಕೆ ರಕ್ತವನ್ನು ದೂಡಿಕೊಡಲು ಹೆಚ್ಚಿನ ಶ್ರಮಬೇಕಾಗಿಲ್ಲ. ಅದೇ ಕುರ್ಚಿಯಲ್ಲಿ ಕುಳಿತಿದ್ದಾಗ ಪಾದಗಳಿಗೆ ರಕ್ತವನ್ನು ತಲುಪಿಸಲು ಹೆಚ್ಚಿನ ಒತ್ತಡ ಬೇಕಾಗುತ್ತದೆ. ಊಟದ ಸಮಯದಲ್ಲಿ ಚಕ್ಕಲ ಮಕ್ಕಲದ ಭಂಗಿಯಲ್ಲಿ ಜೀರ್ಣಾಂಗಗಳಿಗೆ ಹೆಚ್ಚಿನ ರಕ್ತ ಒದಗಿಸಲು ಈ ಮೂಲಕ ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ.

Comments are closed.