ಕರಾವಳಿ

ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಶ್ಲಾಘನೀಯ – ಡಾ. ಕೆ. ವಿ. ರಾವ್

Pinterest LinkedIn Tumblr

ಮಂಗಳೂರು: ಕರ್ನಾಟಕ ಸರಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ರಾಜ್ಯದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ‘ಚೇತನ’ ಎಂಬ ಕಾರ್ಯಕ್ರಮವನ್ನು ಸ್ಯಾಮ್‌ಸಂಗ್ ಮತ್ತು ಇನ್ಫೊಸಿಸ್ ಫೌಂಡೇಶನ್ ಜತೆಗೂಡಿ ನಡೆಸುತ್ತಿದೆ.

ಇದರ ಉದ್ದೇಶ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆಗಳನ್ನು ನೀಡುವುದು. ಒಂದು ವಾರದ ಅವಧಿಯ ಈ ಶಿಬಿರದಲ್ಲಿ ಅವರಿಗೆ ತಂತ್ರಜ್ಞಾನದ ವಿವಿಧ ಕ್ಷೇತ್ರಗಳ ಪರಿಚಯ, ಇರುವ ಅವಕಾಶಗಳು, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮಗೆ ಬೇಕಾದ ಕ್ಷೇತ್ರಗಳನ್ನು ಆರಿಸುವಲ್ಲಿ ಸಹಾಯ, ವಿವಿಧ ಕ್ಷೇತ್ರಗಳ ತಜ್ಞರೊಡನೆ ಸಂವಾದ, ಮನೋರಂಜನೆ, ಯೋಗ ಇತ್ಯಾದಿಗಳನ್ನು ಹಮ್ಮಿಕೊಳ್ಳಲಾಗುವುದು.

ಈ ಬಾರಿ ಮಂಗಳೂರಿನ ಮುಡಿಪು ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸುಮಾರು 400 ವಿದ್ಯಾರ್ಥಿನಿಯರು ಹಾಗೂ ಸಂಯೋಜಕರು ಭಾಗವಹಿಸುತ್ತಿದ್ದಾರೆ.

ಇದರ ಅಂಗವಾಗಿ ಪಿಲಿಕುಳದ ಭೇಟಿಗೆ ಐ.ಸಿ.ಟಿ. ಸೊಸೈಟಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮೌಲಿಶ್ರೀ, ಮಂಗಳೂರು ಕ್ಯಾಂಪ್ ಸಂಯೋಜಕರಾದ ಡಾ. ಶಂಶಾಕ್ ಶೆಟ್ಟಿ, ಇಲಾಖೆಯ ಶ್ರೀ ಪ್ರಭು ರಘುನಾಥ್, ಶ್ರೀ ಮೋಹನ್ ಇವರ ನೇತೃತ್ವದಲ್ಲಿ ವಿದ್ಯಾರ್ಥಿನಿಯರು  ಯೋಜಿತ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ಕೆ. ವಿ. ರಾವ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿನಿಯರಿಗೆ ಶೈಕ್ಷಣಿಕವಾಗಿ ಬೆಳೆಯಲು ಅತ್ಯಂತ ಸ್ಫೂರ್ತಿದಾಯಕವಾಗಿದ್ದು, ಇದನ್ನು ರೂಪಿಸಿದ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸಿ, ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಶ್ಲಾಘನೀಯ ಎಂದರು. ಪಿಲಿಕುಳ ಬೆಳೆದು ಬಂದ ದಾರಿ ಮತ್ತು ಧ್ಯೇಯೋದ್ಧೇಶಗಳನ್ನು ವಿವರಿಸಿದರು.

ನಂತರ ಎಲ್ಲರಿಗೆ ತಾರಾಲಯ ಪ್ರದರ್ಶನ, ವಿಜ್ಞಾನ ಕೇಂದ್ರದ ಗ್ಯಾಲರಿಗಳ ಭೇಟಿ ಮತ್ತು ವಿಜ್ಞಾನ ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸಲಾಯಿತು. ವಿದ್ಯಾರ್ಥಿನಿಯರು ತುಂಬು ಆಸಕ್ತಿಯಿಂದ ಪ್ರಾತ್ಯಕ್ಷಿಕೆಗಳಲ್ಲಿ ಹಾಗೂ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಎದ್ದು ಕಾಣುತ್ತಿತ್ತು. ನಂತರ ಜೈವಿಕ ಉದ್ಯಾನ ವನ, ಗುತ್ತು ಮನೆ, ಕರಕುಶಲ ಗ್ರಾಮ ಭೇಟಿಯನ್ನು ಸಹ ಆಯೋಜಿಸಲಾಗಿತ್ತು. ಡಾ. ಮೌಲಿಶ್ರೀ ಇತರ ಅಧಿಕಾರಿಗಳು ಪಿಲಿಕುಳದ ಸಂದರ್ಶನ ಬಹುವಾಗಿ ಮೆಚ್ಚಿಕೊಂಡರು.

Comments are closed.