ಕರಾವಳಿ

ನರಗಳ ಉಬ್ಬುವಿಕೆಯಿಂದ ತೊಂದರೆ ಇದೆಯೇ.. ಈ ಸಮಸ್ಯೆಗೆ ಕಾರಣ ಯಾವುದು..?ಬಲ್ಲಿರಾ…?

Pinterest LinkedIn Tumblr

ನಮ್ಮ ಶರೀರದಲ್ಲಿಯ ಉಬ್ಬಿದ ರಕ್ತನಾಳಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ವೇರಿಕೋಸ್ ವೇಯ್ನ್ಸಿ ಎಂದು ಕರೆಯಲಾಗುತ್ತದೆ. ಯಾವುದೇ ನರವು ಉಬ್ಬಬಹುದು,ಆದರೆ ಸಾಮಾನ್ಯವಾಗಿ ಕಾಲಿನ ಮತ್ತು ಪಾದಗಳ ನರಗಳು ಈ ಸಮಸ್ಯೆಗೊಳಗಾಗುತ್ತವೆ. ನಿಲ್ಲುವುದರಿಂದ ಮತ್ತು ನಡೆದಾಡುವುದರಿಂದ ನಮ್ಮ ಶರೀರದ ಕೆಳಗಿನ ಭಾಗದಲ್ಲಿರುವ ರಕ್ತನಾಳಗಳ ಮೇಲೆ ಒತ್ತಡವುಂಟಾಗುವುದು ಇದಕ್ಕೆ ಕಾರಣವಾಗಿದೆ.

ಹೆಚ್ಚಿನ ಜನರಿಗೆ ಈ ವೇರಿಕೋಸ್ ಮತ್ತು ಜೇಡರ ಬಲೆಯಂತೆ ಕಾಣುವ ಸ್ಪೈಡರ್ ವೇಯ್ನಿಗಳು ಅಂತಹ ತೊಂದರೆಗಳನ್ನು ನೀಡುವುದಿಲ್ಲ. ಅವರ ಚಿಂತೆಯೇನಿದ್ದರೂ ಈ ನರಗಳು ತಮ್ಮ ಅಂದಗೆಡಿಸುತ್ತವೆ ಎನ್ನುವುದಕ್ಕಷ್ಟೇ ಸೀಮಿತವಾಗಿರುತ್ತದೆ. ಆದರೆ ಕೆಲವರಲ್ಲಿ ಈ ಉಬ್ಬಿದ ನರಗಳು ನೋವನ್ನುಂಟು ಮಾಡುತ್ತವೆ. ಕೆಲವೊಮ್ಮೆ ಈ ನರಗಳು ಹೆಚ್ಚು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ವೇರಿಕೋಸ್ ವೇಯ್ನ್ಸ ಇತರ ರಕ್ತ ಪರಿಚಲನೆ ಸಮಸ್ಯೆಗಳ ಅಪಾಯವನ್ನೂ ಹೆಚ್ಚಿಸಬಹುದು.

ವೇರಿಕೋಸ್ ವೇಯ್ನ್ಸ ಯಾವುದೇ ನೋವನ್ನುಂಟು ಮಾಡದಿರಬಹುದು. ಕಾಲಿನ ನರಗಳು ಕಡು ನೇರಳೆ ಅಥವಾ ನೀಲಿಬಣ್ಣಕ್ಕೆ ತಿರುಗುವುದು,ನರಗಳು ತಿರುಚಿದಂತೆ ಮತ್ತು ಉಬ್ಬಿದಂತೆ ಕಾಣುವುದು,ಕೆಲವೊಮ್ಮೆ ಕಾಲಿನ ಚರ್ಮದಲ್ಲಿ ಬಳ್ಳಿಗಳಂತಿರುವುದು ಇವು ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ನೋವು ಕಾಣಿಸಿಕೊಳ್ಳುವದು ಮತ್ತು ಕಾಲುಗಳು ಭಾರವಾದಂತೆ ಅನ್ನಿಸುವುದು, ಕಾಲುಗಳ ಕೆಳಭಾಗದಲ್ಲಿ ಉರಿ,ಸ್ನಾಯು ಸೆಳೆತ ಮತ್ತು ಊತ,ಹೆಚ್ಚು ಹೊತ್ತು ಕುಳಿತುಕೊಂಡರೆ ಮತ್ತು ನಿಂತುಕೊಂಡಿದ್ದರೆ ನೋವು ಹೆಚ್ಚುವುದು,ಒಂದು ಅಥವಾ ಹೆಚ್ಚಿನ ನರಗಳ ಸುತ್ತ ತುರಿಕೆ,ನರಗಳಿಂದ ರಕ್ತಸ್ರಾವ ಇವುಗಳೂ ಕಂಡು ಬರಬಹುದು.

ನರಗಳ ಜಾಗದಲ್ಲಿ ಬಣ್ಣ ಕಳೆದುಕೊಂಡ ಕಲೆಗಳು,ನರಗಳು ಪೆಡಸಾಗುವುದು,ಚರ್ಮದ ಉರಿಯೂತ ಮತ್ತು ಕಣಕಾಲುಗಳ ಬಳಿ ಚರ್ಮದಲ್ಲಿ ಹುಣ್ಣುಗಳು ಇವು ರಕ್ತನಾಳಗಳ ಗಂಭೀರ ರೋಗವನ್ನು ಸೂಚಿಸುತ್ತವೆ ಮತ್ತು ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ.

ಸ್ಪೈಡರ್ ವೇಯ್ನಗಳು ವೇರಿಕೋಸ್ ವೇಯ್ನಗಳನ್ನೇ ಹೋಲುತ್ತವಾದರೂ ಗಾತ್ರದಲ್ಲಿ ಸಣ್ಣದಾಗಿರುತ್ತವೆ. ಅವು ಚರ್ಮದ ಮೇಲ್ಮೈಗೆ ಸಮೀಪದಲ್ಲಿದ್ದು,ಕೆಂಪು ಅಥವಾ ನೀಲಿ ಬಣ್ಣದ್ದಾಗಿರುತ್ತವೆ. ಇವು ಸಾಮಾನ್ಯವಾಗಿ ಕಾಲುಗಳಲ್ಲಿ ಕಾಣಿಸಿಕೊಳ್ಳುತ್ತವೆಯಾದರೂ ಕೆಲವೊಮ್ಮೆ ಮುಖದಲ್ಲಿಯೂ ಕಂಡುಬರಬಹುದು. ಇವು ವಿವಿಧ ಗಾತ್ರಗಳಲ್ಲಿದ್ದು,ನೋಡಲು ಜೇಡರ ಬಲೆಯನ್ನು ಹೋಲುತ್ತವೆ.

ಅಗತ್ಯ ವ್ಯಾಯಾಮ, ಮಲಗುವಾಗ ಕಾಲುಗಳನ್ನು ಎತ್ತರದಲ್ಲಿರಿಸಿಕೊಳ್ಳುವುದು ಮತ್ತು ಮಾಂಸಖಂಡಗಳನ್ನು ಸಂಕುಚಿತಗೊಳಿಸುವ ಕಾಲುಚೀಲಗಳನ್ನು ಧರಿಸುವುದರಿಂದ ವೇರಿಕೋಸ್ ವೇಯ್ನಾಗಳ ನೋವನ್ನು ಕಡಿಮೆ ಮಾಡಬಹುದು ಮತ್ತು ಅವು ಇನ್ನಷ್ಟು ಉಲ್ಬಣಗೊಳ್ಳುವುದನ್ನು ತಡೆಯಬಹುದು. ಆದರೆ ಇದರಿಂದ ನಿರೀಕ್ಷಿತ ಪರಿಣಾಮವಿಲ್ಲದಿದ್ದರೆ ವೈದ್ಯರನ್ನು ಕಾಣುವುದು ಒಳ್ಳೆಯದು.

ಅಪಧಮನಿಗಳು ಹೃದಯದಿಂದ ಶರೀರದ ಇತರ ಅಂಗಾಂಶಗಳಿಗೆ ಆಮ್ಲಜನಕಯುಕ್ತ ಶುದ್ಧರಕ್ತವನ್ನು ಸಾಗಿಸುತ್ತವೆ. ಅಭಿಧಮನಿಗಳು ಶರೀರದ ಇತರ ಭಾಗಗಳಿಂದ ಮಲಿನ ರಕ್ತವನ್ನು ಹೃದಯಕ್ಕೆ ಸಾಗಿಸುತ್ತವೆ. ಅಲ್ಲಿ ಈ ರಕ್ತವು ಶುದ್ಧಗೊಂಡು ಪುನಃ ಪರಿಚಲನೆಯಾಗುತ್ತದೆ. ಮಲಿನ ರಕ್ತವನ್ನು ಹೃದಯಕ್ಕೆ ಮರಳಿಸಬೇಕಾದರೆ ನಮ್ಮ ಕಾಲುಗಳು ಗುರುತ್ವಾಕರ್ಷಣೆಯ ವಿರುದ್ಧ ಶ್ರಮಿಸಬೇಕಾಗುತ್ತದೆ.

ನಮ್ಮ ಕಾಲುಗಳ ಕೆಳಭಾಗದಲ್ಲಿರುವ ಸ್ನಾಯುಗಳು ಸಂಕೋಚನಗೊಂಡು ಪಂಪ್‌ನಂತೆ ಕಾರ್ಯ ನಿರ್ವಹಿಸುತ್ತವೆ ಮತ್ತು ಸ್ಥಿತಿಸ್ಥಾಪಕ ಗುಣವನ್ನು ಹೊಂದಿರುವ ಅಭಿಧಮನಿಗಳ ಭಿತ್ತಿಗಳು ರಕ್ತವನ್ನು ಹೃದಯಕ್ಕೆ ಮರಳಿ ಸಾಗಿಸುವಲ್ಲಿ ನೆರವಾಗುತ್ತವೆ. ರಕ್ತವು ಹೃದಯದತ್ತ ಹರಿಯತೊಡಗಿದಂತೆ ಅಭಿಧಮನಿಗಳಲ್ಲಿಯ ಪುಟ್ಟ ಕವಾಟಗಳು ತೆರೆದುಕೊಳ್ಳುತ್ತವೆ ಮತ್ತು ನಂತರ ರಕ್ತವು ಹಿಂಬದಿಗೆ ಹರಿಯುವುದನ್ನು ತಡೆಯಲು ಮುಚ್ಚಿಕೊಳ್ಳುತ್ತವೆ.

ವಯಸ್ಸಾಗುತ್ತಿದ್ದಂತೆ ನಮ್ಮ ಅಭಿಧಮನಿಗಳು ಸ್ಥಿತಿಸ್ಥಾಪಕತ್ವ ಗುಣವನ್ನು ಕಳೆದುಕೊಳ್ಳುತ್ತವೆ ಮತ್ತು ಹಿಗ್ಗಲು ಆರಂಭಗೊಳ್ಳುತ್ತವೆ. ಅವುಗಳಲ್ಲಿಯ ಕವಾಟಗಳು ದುರ್ಬಲಗೊಳ್ಳಬಹುದು ಮತ್ತು ಸರಿಯಾಗಿ ಮುಚ್ಚಿಕೊಳ್ಳದೆ ಹೃದಯದತ್ತ ಸಾಗಬೇಕಾದ ರಕ್ತವು ವಾಪಸ್ ಹರಿಯಲು ಅವಕಾಶ ನೀಡಬಹುದು. ಇದರಿಂದಾಗಿ ಮಲಿನ ರಕ್ತವು ಅಭಿಧಮನಿಗಳಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ಅವು ಉಬ್ಬಿಕೊಳ್ಳುತ್ತವೆ ಹಾಗೂ ವೇರಿಕೋಸ್ ವೇಯ್ನ್ಸಿ ಹೆಸರಿನಿಂದ ಕರೆಸಿಕೊಳ್ಳುತ್ತವೆ. ಈ ನರಗಳು ಆಮ್ಲಜನಕರಹಿತವಾದ,ಶುದ್ಧೀಕರಣ ಮತ್ತು ಮರು ಪರಿಚಲನೆಗಾಗಿ ಹೃದಯಕ್ಕೆ ಸಾಗಬೇಕಾಗಿದ್ದ ಮಲಿನ ರಕ್ತವನ್ನು ಒಳಗೊಂಡಿರುವುದರಿಂದ ನೀಲಿಬಣ್ಣದ್ದಾಗಿ ಕಂಡುಬರುತ್ತವೆ.

ಕೆಲವು ಗರ್ಭಿಣಿ ಮಹಿಳೆಯರಲ್ಲಿ ವೇರಿಕೋಸ್ ವೇಯ್ನಗಳು ಕಂಡು ಬರುತ್ತವೆ. ಗರ್ಭಾವಸ್ಥೆಯು ಶರೀರದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ,ಆದರೆ ಕಾಲುಗಳಿಂದ ವಸ್ಥಿಕುಹರಕ್ಕೆ ಅಥವಾ ಸೊಂಟದ ಕಡೆಗೆ ರಕ್ತದ ಹರಿವನ್ನು ತಗ್ಗಿಸುತ್ತದೆ. ಭ್ರೂಣದ ಬೆಳವಣಿಗೆಗೆ ಪೂರಕವಾಗುವುದು ಈ ರಕ್ತ ಪರಿಚಲನೆ ಬದಲಾವಣೆಯ ಉದ್ದೇಶವಾಗಿದೆ,ಆದರೆ ಅದು ವೇರಿಕೋಸ್ ವೇಯ್ನ್ಸಿನ ಅಡ್ಡಪರಿಣಾಮಕ್ಕೂ ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ಹಾರ್ಮೋನ್‌ಗಳ ಸ್ರವಿಸುವಿಕೆಯಲ್ಲಿ ಬದಲಾವಣೆಗಳೂ ಇದಕ್ಕೆ ಕಾರಣವಾಗಬಹುದು. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ವೇರಿಕೋಸ್ ವೇಯ್ನೆಗಳು ಸಾಮಾನ್ಯವಾಗಿ ಹೆರಿಗೆಯಾದ ಒಂದು ವರ್ಷದಲ್ಲಿ ಯಾವುದೇ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲದೆ ನಿವಾರಣೆಯಾಗುತ್ತವೆ.

ನಮಗೆ ವಯಸ್ಸಾಗುತ್ತಿದ್ದಂತೆ ವೇರಿಕೋಸ್ ವೇಯ್ನಿಗಳ ಸಮಸ್ಯೆಗೆ ಗರಿಯಾಗುವ ಅಪಾಯವೂ ಹೆಚ್ಚುತ್ತದೆ. ಈ ಸಮಸ್ಯೆಗೆ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಗುರಿಯಾಗುತ್ತಾರೆ. ಗರ್ಭಿಣಿಯಾಗಿದ್ದಾಗಿನ ಅವಧಿಯಲ್ಲಿ ಹಾರ್ಮೋನ್ ಬದಲಾವಣೆಗಳು,ಅವಧಿಗೆ ಮುನ್ನವೇ ಮುಟ್ಟು,ಋತುಬಂಧ ಇವೂ ಈ ಸಮಸ್ಯೆಗೆ ಕಾರಣವಾಗುತ್ತವೆ. ಹಾರ್ಮೋನ್ ರಿಪ್ಲೇಸ್‌ಮೆಂಟ್ ಚಿಕಿತ್ಸೆ ಮತ್ತು ಸಂತಾನ ನಿಯಂತ್ರಣ ಮಾತ್ರೆಗಳ ಸೇವನೆಯೂ ವೇರಿಕೋಸ್ ವೇಯ್ನ್ಸೆ ಅಪಾಯವನ್ನು ಹೆಚ್ಚಿಸಬಹುದು.

ಕುಟುಂಬದಲ್ಲಿ ಯಾರಾದರೂ ವೇರಿಕೋಸ್ ವೇಯ್ನ್ಸ ಹೊಂದಿದ್ದ ಇತಿಹಾಸವಿದ್ದರೆ ಈ ಸಮಸ್ಯೆಗೆ ಗುರಿಯಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ. ಅತಿಯಾದ ಬೊಜ್ಜು ಹೊಂದಿದ್ದರೆ ಕಾಲಿನ ನರಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುವುದೂ ಇದಕ್ಕೆ ಒಂದು ಕಾರಣವಾಗಿದೆ. ಸುದೀರ್ಘ ಕಾಲ ನಿಂತುಕೊಂಡಿದ್ದರೆ ಅಥವಾ ಒಂದೇ ಭಂಗಿಯಲ್ಲಿ ಕುಳಿತಿದ್ದರೆ ರಕ್ತದ ಪರಿಚಲನೆಯು ಸುಲಲಿತವಾಗಿರುವುದಿಲ್ಲ ಮತ್ತು ಇದೂ ವೇರಿಕೋಸ್ ವೇಯ್ನ್ಸೆಗೆ ಕಾರಣವಾಗಬಹುದು.

ವೇರಿಕೋಸ್ ವೇಯ್ನ್ಸನಿಂದ ಇತರ ಸಮಸ್ಯೆಗಳು ಅಪರೂಪವಾಗಿವೆ. ವೇರಿಕೋಸ್ ವೇಯ್ನೆಗಳ ಸಮೀಪ,ನಿರ್ದಿಷ್ಟವಾಗಿ ಕಣಕಾಲುಗಳ ಬಳಿ ಚರ್ಮದಲ್ಲಿ ಹುಣ್ಣುಗಳು ಇವುಗಳಲ್ಲಿ ಸೇರಿವೆ. ಇಂತಹ ಹುಣ್ಣು ಉಂಟಾಗುವ ಮುನ್ನ ಚರ್ಮವು ಬಣ್ಣ ಕಳೆದುಕೊಂಡು ಕಲೆಯು ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ. ಕೆಲವೊಮ್ಮೆ ಕಾಲುಗಳ ತೀರ ಆಳದಲ್ಲಿರುವ ರಕ್ತನಾಳಗಳು ಉಬ್ಬಿಕೊಳ್ಳುತ್ತವೆ. ಹೀಗಾದಾಗ ಕಾಲಿನಲ್ಲಿ ಗಣನೀಯ ಊತ ಕಾಣಿಸಿಕೊಳ್ಳಬಹುದು. ಇಂತಹ ದಿಢೀರ್ ಊತ ಕಾಣಿಸಿಕೊಂಡರೆ ಅದು ವ್ಯೆದ್ಯಕೀಯ ಭಾಷೆಯಲ್ಲಿ ಥ್ರೋಂಬೊಫ್ಲೆಬಿಟಿಸ್ ಎಂದು ಕರೆಯಲಾಗುವ ರಕ್ತ ಹೆಪ್ಪುಗಟ್ಟುವಿಕೆಯನ್ನು ಸೂಚಿಸಬಹುದು. ಕೆಲವೊಮ್ಮೆ ಚರ್ಮಕ್ಕೆ ಸಮೀಪವಿರುವ ಉಬ್ಬಿದ ರಕ್ತನಾಳವು ಒಡೆಯಬಹುದು ಮತ್ತು ಇದರಿಂದ ಸಾಮಾನ್ಯವಾಗಿ ಅಲ್ಪ ರಕ್ತಸ್ರಾವವುಂಟಾಗುತ್ತದೆ. ಆದರೆ ಇದು ಮತ್ತೆ ಮತ್ತೆ ಉಂಟಾಗುವ ಅಪಾಯವಿರುವುದರಿಂದ ವೈದ್ಯಕೀಯ ತಪಾಸಣೆ ಮುಖ್ಯವಾಗುತ್ತದೆ.

ವೇರಿಕೋಸ್ ವೇಯ್ನಗಳನ್ನು ತಡೆಯಲು ಪರಿಪೂರ್ಣವಾದ ಮಾರ್ಗವಿಲ್ಲ. ರಕ್ತ ಪರಿಚಲನೆಯನ್ನು ಮತ್ತು ಸ್ನಾಯುಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಿಕೊಳ್ಳುವ ಮೂಲಕ ವೇರಿಕೋಸ್ ವೇಯ್ನ್ಸಾ ಉಂಟಾಗುವ ಅಪಾಯವನ್ನು ತಗ್ಗಿಸಬಹುದು ಅಥವಾ ಇನ್ನಷ್ಟು ವೇರಿಕೋಸ್ ವೇಯ್ನಿಗಳು ಆಗುವುದನ್ನು ತಡೆಗಟ್ಟಬಹುದು. ನಿಯಮಿತ ವ್ಯಾಯಾಮ,ದೇಹತೂಕದ ಮೇಲೆ ನಿಯತ್ರಣ,ಅಧಿಕ ನಾರು ಮತ್ತು ಉಪ್ಪು ಕಡಿಮೆಯಿರುವ ಆಹಾರ ಸೇವನೆ,ಹೈಹೀಲ್ಡ್‌ಗಳು ಮತ್ತು ಬಿಗಿಯಾದ ಉಡುಪುಗಳನ್ನು ಧರಿಸದಿರುವುದು,ಮಲಗಿದಾಗ ಕಾಲುಗಳನ್ನು ಎತ್ತರದಲ್ಲಿರಿಸುವುದು, ನಿಂತುಕೊಂಡ ಮತ್ತು ಕುಳಿತುಕೊಂಡ ಭಂಗಿಗಳನ್ನು ಆಗಾಗ್ಗೆ ಬದಲಿಸುವುದು ಇವೇ ಮುಂತಾದ ಸರಳ ಕ್ರಮಗಳಿಂದ ಈ ಸಮಸ್ಯೆಯಿಂದ ದೂರವಿರಬಹುದಾಗಿದೆ.

Comments are closed.