ಮಂಗಳೂರು,ಮೇ.19: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಶನಿವಾರ ಹೊಸ ಸರಕಾರದ ವಿಶ್ವಾಸ ಮತ ಯಾಚನೆ ಸಂದರ್ಭ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಹಾಗೂ ದ.ಕ.ಜಿಲ್ಲಾ ಜೆಡಿಎಸ್ ಕಾರ್ಯಾಕರ್ತರು ಕಾಂಗ್ರೆಸ್ ಕಚೇರಿ ಮುಂಭಾಗದಲ್ಲಿ ಸಂಭ್ರಮಾಚರಣೆ ನಡೆಸಿದರು.
ಬಿ.ಎಸ್ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಿಶ್ರ ಸರಕಾರ ನಡೆಸುವುದಾಗಿ ಘೋಷಣೆ ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಶಾಸಕರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿ ಮುಂಬಾ ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಿ ಸಂಭ್ರಮ ಆಚರಿಸಿದರು.
ನಿಷೇದಾಜ್ಙೆ ಉಲ್ಲಂಘನೆ – ಆರೋಪ
ರಾಜ್ಯದಲ್ಲಿ ಹೊಸ ಸರಕಾರ ವಿಶ್ವಾಸ ಮತ ಯಾಚನೆ ಸಂದರ್ಭ ಮಂಗಳೂರಿನಲ್ಲಿ ಯಾವೂದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಅವರು ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು.
ಮಂಗಳೂರಿನಲ್ಲಿ ರಾಜಕೀಯ ಘರ್ಷಣೆ ನಡೆಯುವ ಆತಂಕ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ನಿಷೇಧಾಜ್ಞೆ ಅನ್ವಯ ಸಾರ್ವಜನಿಕರು 5 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ , ಕೆರಿಗಳಲ್ಲಿ , ಸಾರ್ವಜನಿಕ ಕಟ್ಟಡ ಮತ್ತು ಸರಕಾರಿ ಕಟ್ಟಡ ಕಚೇರಿ ಸುತ್ತಮುತ್ತ ಗುಂಪು ಸೇರುವುದನ್ನು ನಿಷೇಧಿಸಲಾಗಿತ್ತು.
ಮಾತ್ರವಲ್ಲದೇ ಯಾವುದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ , ರಾಜಕೀಯ ಸಭೆ ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿತ್ತು.. ಪಟಾಕಿ ಸಿಡಿಸುವುದು , ಅಥವಾ ಇನ್ನಿತರ ಸ್ಪೋಟಕ ವಸ್ತುಗಳನ್ನು ಸಿಡಿಸುವುದನ್ನು ಅಥವಾ ಹೊಂದಿರುವುದನ್ನು ಸೆಕ್ಷನ್ 144 ಅನ್ವಯ ನಿಷೇಧಿಸಲಾಗಿದೆ. ಆದರೆ ನಿಷೇದಾಜ್ಙೆಯ ನಡುವೆಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ಪಟಾಕಿ ಸಿಡಿಸಿ, ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಗೆ ಜೈಕಾರ ಹಾಕಿ ಸಂಭ್ರಮಾಚರಣೆ ನಡೆಸುವ ಮೂಲಕ ನಿಷೇದಾಜ್ಙೆಯನ್ನು ಉಲ್ಲಂಘಿಸಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
Comments are closed.