ಕರಾವಳಿ

ಕಡಬ ಹಳೆ ಪೋಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ : ಕಟ್ಟಡಕ್ಕೆ ಹಾಗೂ ಪರಿಸರದ ಮನೆಗಳ ಕಿಟಕಿ ಗಾಜುಗಳಿಗೆ ಹಾನಿ

Pinterest LinkedIn Tumblr

ಕಡಬ, ಮೇ.17. ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಹಳೆ ಪೋಲೀಸ್ ಠಾಣೆಯ ಕಟ್ಟಡದಲ್ಲಿ ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಭಾರೀ ಸದ್ದಿನೊಂದಿಗೆ ಸ್ಫೋಟವೊಂದು ನಡೆದಿದ್ದು, ಘಟನೆಯಿಂದ ಕಟ್ಟಡಕ್ಕೆ ಬಾರೀ ಪ್ರಮಾಣದಲ್ಲಿ ಹಾನಿಯಾಗಿದೆ.

ಠಾಣೆಯ ಹಳೆಯ ಈ ಕಟ್ಟಡವನ್ನು ಗೃಹ ರಕ್ಷಕ ದಳದ ಕಚೇರಿಯನ್ನಾಗಿ ಬಳಸಲಾಗುತ್ತಿದ್ದು, ಕಟ್ಟಡದಲ್ಲಿ ಕಡಬ ಪೋಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ಹೋಂಗಾರ್ಡ್ ಗಳು ತಂಗುತ್ತಿದ್ದರು.ಸ್ಪೋಟ ಸಂಭವಿಸುವ ವೇಳೆ ಇಲ್ಲಿ ಯಾರೂ ಇರಲಿಲ್ಲ.ಆದರೆ ಘಟನೆ ನಡೆಯುವುದಕ್ಕಿಂತ ಕೆಲವೇ ಕ್ಷಣಗಳ ಮುಂಚೆ ಸ್ಥಳದಲ್ಲಿದ್ದ ಇಬ್ಬರು ಸಿಬ್ಬಂದಿಗಳು ಅಲ್ಲಿಂದ ತೆರಳಿದ್ದು, ಸಂಭಾವ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಪೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಪೋಟದ ತೀವ್ರತೆಗೆ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಕಟ್ಟಡದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕೆಲವು ವಾಹನಗಳಿಗೂ ಹಾನಿಯಾಗಿವೆ. ಅಲ್ಲದೆ ಕಡಬ ಪರಿಸರದ ಕೆಲವು ಮನೆಗಳ ಕಿಟಕಿ ಗಾಜುಗಳು ಒಡೆದಿದ್ದು, ಸ್ಫೋಟದಿಂದ ಉಂಟಾದ ಭಾರೀ ಸದ್ದಿಗೆ ಸಾರ್ವಜನಿಕರು ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಂಕೆ..?

ಕಡಬ ಪೋಲೀಸರು ಸ್ಪೋಟಕ್ಕೆ ಕಾರಣ ಏನು ಎನ್ನುವ ಕುರಿತು ತನಿಖೆ ಆರಂಭಿಸಿದ್ದಾರೆ. ಈ ಹಿಂದೆ ಯಾವೂದಾದರೂ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಸ್ಪೋಟಕ ವಸ್ತುಗಳೆನಾದರೂ ಇಲ್ಲಿದ್ದು, ಇದರಿಂದ ಸ್ಪೋಟ ಸಂಭವಿಸಿರ ಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಇದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.

Comments are closed.