ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಅರಳಿದ ‘ಕಮಲ’: 5 ಕ್ಷೇತ್ರದಲ್ಲಿ ಗೆಲುವಿನ‌ ನಗೆ ಬೀರಿದ ಬಿಜೆಪಿ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಪೈಕಿ 5 ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಉಡುಪಿಯ ಟಿ.ಎ ಪೈ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಸಮೀಪದ ಎಂಜಿಎಂ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.

ಬಿಜೆಪಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದು ಇಡೀ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಉಡುಪಿ ಕರವಾಳಿಯಲ್ಲಿ ಮತ್ತೆ ಬಿಜೆಪಿ ಭದ್ರಕೋಟೆ ನಿರ್ಮಿಸಿದೆ.

ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ತನ್ನ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ವಿರುದ್ದ ಬಾರೀ ಅಂತರದೊಂದಿಗೆ ಗೆಲುವು ಸಾಧಿಸಿದ್ದಾರೆ. ಜಿಲ್ಲೆಯಲ್ಲೇ ಅತಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿ ಹಾಲಾಡಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇನ್ನು ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ್ ಭಂಡಾರಿ ವಿರುದ್ದ ಬಾರೀ ಅಂತರದೊಂದಿಗೆ ವಿಜಯದ ನಗೆ ಬೀರಿದ್ದಾರೆ. ಅತೀ ಹೆಚ್ಚು ಮತಗಳ ಅಂತರ ಪಡೆದ ಎರಡನೇ ಅಭ್ಯರ್ಥಿ ಸುನೀಲ್.

ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿಎಂ ಸುಕುಮಾರ ಶೆಟ್ಟಿ ಅವರು ಈ ಹಿಂದಿನ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಉಡುಪಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಹಾಗೂ ಈ ಹಿಂದಿನ ಶಾಸಕ ಹಾಗೂ ಸಚಿವ ಪ್ರಮೋದ್ ಮಧ್ವರಾಜ್ ನಡುವೆ ಬಾರಿ ಪೈಪೋಟಿ ನಡೆದಿದ್ದು ರಘುಪತಿ ಭಟ್ ವಿಜಯಶಾಲಿಯಾಗಿದ್ದಾರೆ.

ಕಾಪುವಿನಲ್ಲಿ ಕೂಡ ಹಿಂದಿನ ಶಾಸಕ ವಿಜಯಕುಮಾರ್ ಸೊರಕೆ ಮತ್ತು ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್. ಮೆಂಡನ್ ನಡುವೆ ಪೈಪೋಟಿ ಏರ್ಪಟ್ಟಿದ್ದು ಲಾಲಾಜಿ ಮೆಂಡನ್ ಗೆಲವು ಸಾಧಿಸಿದ್ದಾರೆ.

ಕಾರ್ಯಕರ್ತರ ಸಂಭ್ರಮ..
ಒಂದೊಂದು ಸುತ್ತಿನ ಮತ ಎಣಿಕೆ ನಡೆದು ಮತದ ಪ್ರಮಾಣ ಘೋಷಿಸುತ್ತಿದ್ದಂತೆಯೇ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಅಭ್ಯರ್ಥಿಗಳ ಪರ ಜೈಕಾರ ಕೂಗುತ್ತಾ ಸಂಭ್ರಮ ಪಡುತ್ತಿದ್ದರು. ಇನ್ನು ಮೋದಿ ಪರ ಘೋಷಣೆ ಮುಗಿಲು ಮುಟ್ಟಿತ್ತು.

ಹಾಲಾಡಿಗೆ ಹಾಲಿನ ಅಭಿಷೇಕ..
ಕುಂದಾಪುರ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಭಿಮಾನಿಗಳು ಅವರ ಫೋಟೋಗೆ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಗೌರವ ಸಲ್ಲಿಸಿದರು.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.