ಕರಾವಳಿ

ಆಕಾಶಕ್ಕೆ ಹಾರಿದ ವಿಜಯದ ಬಲೂನ್ : ಚುನಾವಣಾ ಪ್ರಚಾರಕ್ಕೆ ಹೈಟೆಕ್ ಟಚ್ ನೀಡಿದ ಶ್ರೀಕರ್ ಪ್ರಭು

Pinterest LinkedIn Tumblr

ಮಂಗಳೂರು: ಮುಂಬರುವ ವಿಧಾನ ಸಭಾ ಚುನಾವಣೆಗೆ ಈಗಾಗಲೇ ವೈವಿಧ್ಯಮಯ ರೀತಿಯಲ್ಲಿ ಪ್ರಚಾರ ಕೈಗೊಂಡಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರು ಮಂಗಳವಾರ ಆಕಾಶಕ್ಕೆ ಬೃಹತ್ ಬಲೂನ್ ಹಾರಿಬಿಡುವ ಮೂಲಕ ಮತ್ತೊಮ್ಮೆ ತಮ್ಮ ಚುನಾವಣಾ ಪ್ರಚಾರವನ್ನು ವಿಶಿಷ್ಟ ರೀತಿಯಲ್ಲಿ ನಡೆಸಿದ್ದಾರೆ.

ಈಗಾಗಲೇ ನಗರದ ಆಟೋ ರಿಕ್ಷಾ ಚಾಲಕರಿಗೆ ತಮ್ಮ ಚುನಾವಣೆ ಚಿಹ್ನೆಯಾದ ಆಟೋ ರಿಕ್ಷಾ ಮಾದರಿಯನ್ನು ನೀಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಶ್ರೀಕರ್ ಪ್ರಭು ಅವರು, ಮಂಗಳವಾರ ಸಂಜೆ ಬಂಟ್ಸ್ ಹಾಸ್ಟೇಲ್ ಸಮೀಪವಿರುವ ತಮ್ಮ ಚುನಾವಣಾ ಕಚೇರಿ ಮುಂಭಾಗದಲ್ಲಿ ತಮ್ಮ ಭಾವಚಿತ್ರ ಹಾಗೂ ಚುನಾವಣಾ ಚಿಹ್ನೆಯಾದ ಆಟೋ ರಿಕ್ಷಾದ ಚಿತ್ರವಿರುವ ಬೃಹತ್ ಬಲೂನ್ (ಗೆಲುವಿನ ಸಂಕೇತವಾಗಿ) ಅನ್ನು ತಮ್ಮ ಅಪಾರಸಂಖ್ಯೆಯ ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಮಾಗಮದಲ್ಲಿ ಆಕಾಶಕ್ಕೆ ಹಾರಿಬಿಡುವ ಮೂಲಕ ತಮ್ಮ 9ನೇ ಹಂತದ ಚುನಾವಣಾ ಪ್ರಚಾರವನ್ನು ವಿಶಿಷ್ಠವಾಗಿ ನಡೆಸಿದ್ದಾರೆ. ಅತಿಥಿಗಳಾಗಿ ಭಾಗವಹಿಸಿದ ಶ್ರೀಲತಾ ಗೋಪಾಲಕೃಷ್ಣ ಅವರು ಸಾಂಕೇತಿಕವಾಗಿ ಬಲೂನ್ ಅನ್ನು ಅಗಸದೆಡೆಗೆ ಚಿಮ್ಮಿಸಿ ಉದ್ಘಾಟಿಸಿದರು.

ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಶ್ರೀಕರ ಪ್ರಭು ಅವರು, ನನ್ನ ಗೆಲುವಿನ ಸಂಕೇತವಾಗಿ ಬೃಹತ್ ಬಲೂನ್ ಅನ್ನು ಆಕಾಶಕ್ಕೆ ಹಾರಿಬಿಡಲಾಗಿದೆ. ಇದು ವಿಜಯದ ಬಲೂನು, ಇದು ಎಷ್ಟು ಎತ್ತರ ಹೋಗುತ್ತದೋ, ಅಷ್ಟೇ ಮತಗಳ ಅಂತರದಿಂದ ನನ್ನ ಗೆಲುವು ನಿಶ್ಚಿತ. ನಿಮ್ಮೆಲ್ಲರ ಆಶೀರ್ವಾದದಿಂದ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಬರುವುದು ಖಂಡಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೂವತ್ತು ವರ್ಷಗಳ ಸಾಮಾಜಿಕ ಜೀವನದಲ್ಲಿ ನಾನು ಮಾಡಿದ ಸೇವೆಯನ್ನು ಮತದಾರ ಗಮನಿಸಿ, ನನಗೆ ಆಶೀರ್ವಾದ ಮಾಡುತ್ತಾನೆ. ಈ ಬಾರಿ ನನಗೆ ಆಶೀರ್ವಾದ ಮಾಡಿ ನಿಮ್ಮ ಮನೆ ಮನೆಯ ಸಮಸ್ಯೆಗೆ ಸ್ಪಂದಿಸುವ ಕೆಲಸ ನಾನು ಮಾಡುತ್ತೇನೆ. ಹೇಗೆ ಆಟೋರಿಕ್ಷಾ ದಿನದ 24 ಗಂಟೆ ವಾರದ 7 ದಿನ, ವರ್ಷದ 365 ದಿನವೂ ಕೆಲಸ ಮಾಡುತ್ತದೋ ಹಾಗೆ ನಾನು ನಿಮ್ಮ ಸೇವೆ ಮಾಡುತ್ತೇನೆ ನನಗೆ ಈ ಸಲ ಒಂದು ಅವಕಾಶ ಮಾಡಿಕೊಡಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷ ಕೆ.ಪಿ. ಶೆಟ್ಟಿ ಬೇಡೆಮಾರ್, ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್ರ, ಉಸ್ತುವಾರಿ ಸುರೇಶ ಶೆಟ್ಟಿ, ಅಶ್ವಿತ್ ಕುಮಾರ್, ಶರತ್ ಅಮೀನ್, ಜೈರಾಮ್ ಕಾಮತ್, ಯತೀಶ್ ಕುಮಾರ್, ಕಿಶೋರ್ ಕುಮಾರ್, ಜಗದೀಶ್ ಬಂಜನ್, ರವಿ ಕಾವೂರ್, ಪದ್ಮರಾಜ್, ಶ್ರೀಲತಾ ಗೋಪಾಲಕೃಷ್ಣ, ಸೀಮಾ ಪ್ರಭು, ಮಾಯಾ ನಾಯಕ್, ಐಶ್ವರ್ಯ ನಾಯಕ್ ಮತ್ತಿತರು ಉಪಸ್ಥಿತರಿದ್ದರು.

Comments are closed.