ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಮೇ 10ರಂದು ಸಂಜೆ 6 ಗಂಟೆಗೆ ಕೊನೆಗೊಳ್ಳುತ್ತದೆ. ಚುನಾವಣಾ ನೀತಿ ಸಂಹಿತೆ ಪ್ರಕಾರ ಆ ಬಳಿಕ ಬಹಿರಂಗ ಪ್ರಚಾರ ನಡೆಸಲು ಅವಕಾಶವಿಲ್ಲ ಎಂದು ದ.ಕ.ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಸಿದ್ಧತೆ ಬಗ್ಗೆ ವಿವರ ನೀಡಿದ ಅವರು, ಮೇ 12ರಂದು ನಡೆಯುವ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಸೂಚಿಸಲಾಗುವ ಎಲ್ಲಾ ಅಂಶಗಳನ್ನೂ ಮತದಾರರು ಹಾಗೂ ವಿವಿಧ ಪಕ್ಷಗಳು, ಅಭ್ಯರ್ಥಿಗಳು ಪಾಲಿಸಬೇಕು. ಅದಕ್ಕಾಗಿ ಈಗಾಗಲೆ ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಭೆ ಕರೆದು ಮಾಹಿತಿ ನೀಡಲಾಗಿದೆ ಎಂದರು.
ಮೇ 10ರ ಸಂಜೆ 6 ಗಂಟೆಯ ಬಳಿಕ ಮೆರವಣಿಗೆ, ಬಹಿರಂಗ ಪ್ರಚಾರ ನಡೆಸುವುದಕ್ಕೆ ನಿಷೇಧವಿರುತ್ತದೆ. ಆದರೆ ಅಭ್ಯರ್ಥಿಗಳು, ಏಜೆಂಟರು, ಬೆಂಬಲಿಗರು ಮನೆ ಮನೆಗಳಿಗೆ ತೆರಳಿ ಪ್ರಚಾರ ಮಾಡಲು ಅವಕಾಶವಿದೆ. ಈ ಅವಧಿಯಲ್ಲಿ ಕಲಂ 144 ರನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುವುದು. ಈ ಹಿನ್ನೆಲೆಯಲ್ಲಿ 5 ಮಂದಿಗಿಂತ ಹೆಚ್ಚು ಮಂದಿ ಒಟ್ಟು ಸೇರಿ ಮನೆಮನೆ ಪ್ರಚಾರ ನಡೆಸುವಂತಿಲ್ಲ. ಮತದಾನ ಮುಕ್ತಾಯವಾಗುವ ಸಮಯದ ಹಿಂದಿನ 48 ಗಂಟೆಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದರು.
ಮತದಾನ ಪ್ರಕ್ರಿಯೆ ಮುಗಿಯುವ 48 ಗಂಟೆಗೆ ಮುನ್ನ ಅಂದರೆ ಮೇ 10ರ ಸಂಜೆ 6 ಗಂಟೆಯ ಬಳಿಕ ಹೊರಗಿನ ಯಾವೊಬ್ಬ ಚುನಾವಣಾ ತಾರಾ ಪ್ರಚಾರಕ, ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು ಜಿಲ್ಲೆಯ ಯಾವೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲ. ಎಲ್ಲರೂ ಕ್ಷೇತ್ರ ಬಿಟ್ಟು ಸ್ವಸ್ಥಾನ ಸೇರಬೇಕು. ನಿಗದಿತ ಸಮಯದ ಬಳಿಕ ಹೊರಗಿನ ಪ್ರಚಾರಕ ಸಹಿತ ಕ್ಷೇತ್ರ ವ್ಯಾಪ್ತಿಯಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸದಂತೆ ಹೊಟೇಲ್, ಛತ್ರ, ವಸತಿಗೃಹದ ಮಾಲಕರಿಗೆ ಸೂಚಿಸಲಾಗಿದೆ.ಈ ಬಗ್ಗೆ ನೇಮಕ ಮಾಡಲಾದ ವಿವಿಧ ಅಧಿಕಾರಿಗಳು, ಪೊಲೀಸರು ಪರಿಶೀಲನೆ ನಡೆಸಿ ದೃಢಪಡಿಸಿಕೊಳ್ಳಲಿರುವರು. ಈ ಸೂಚನೆ ಮೀರಿ ಜಿಲ್ಲೆಯಲ್ಲಿ ಉಳಕೊಂಡರೆ ಅವರನ್ನು ಹೊರಗೆ ಕಳುಹಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮತಗಟ್ಟೆಯಿಂದ 200 ಮೀ. ದೂರದಲ್ಲಿ ಅಭ್ಯರ್ಥಿಯ ಬೂತು ನಿರ್ಮಿಸಲು ಅವಕಾಶವಿರುತ್ತದೆ. ಈ ಬೂತಿನಲ್ಲಿ 1 ಮೇಜು, 2 ಕುರ್ಚಿಗಳು ಮತ್ತು 3 ಅಡಿ x 1.5 ಅಡಿ ಅಗಲದ ಬ್ಯಾನರನ್ನು ಉಪಯೋಗಿಸಬಹುದಾಗಿದೆ. ಆದರೆ ಬೂತುಗಳನ್ನು ನಿರ್ಮಿಸುವ ಬಗ್ಗೆ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗಿರುತ್ತದೆ. ಮತದಾನ ದಿನಾಂಕದಂದು ಮತಗಟ್ಟೆಯ 100 ಮೀ. ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ಮದ್ಯಪಾನ ಮಾರಾಟ ನಿಷೇಧ : ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಮತದಾನ ದಿನಾಂಕದ 48 ಗಂಟೆಗಳ ಮೊದಲು ಮದ್ಯಪಾನ ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ 6 ತಿಂಗಳ ಸೆರೆವಾಸ / 2,000 ರೂ. ದಂಡನೆ ಅಥವಾ ಅವೆರಡು ಒಳಗೊಂಡಂತೆ ಶಿಕ್ಷೆಗೆ ಒಳಪಡಿಸಲಾಗುವುದು.
ಧ್ವನಿವರ್ಧಕಗಳ ಬಳಕೆ : ಮತದಾನದ ಕೊನೆಯ 48 ಗಂಟೆಗಳಲ್ಲಿ ಚುನಾವಣಾ ಪ್ರಚಾರ ಉದ್ದೇಶಕ್ಕಾಗಿ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ.
ಜಿಲ್ಲೆಯಲ್ಲಿ 216 ದೂರುಗಳು ಸ್ವೀಕೃತಗೊಂಡಿದ್ದು, ಆ ಪೈಕಿ 205 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದವು ತನಿಖೆಯ ಹಂತದಲ್ಲಿದೆ. 23 ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಾಗಿದೆ.
ಈವರೆಗೆ 15,89,500 ರೂ. ಅನಧಿಕೃತ ನಗದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಈ ಪೈಕಿ ದಾಖಲೆ ಪರಿಶೀಲಿಸಿ 12,89,500 ರೂ.ವನ್ನು ಮರಳಿಸಲಾಗಿದೆ.
ಈವರೆಗೆ 31,763.605 ಲೀ.ಅಕ್ರಮ ಸಂಗ್ರಹ ಮತ್ತು ಮಾರಾಟದ ಮದ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ 1,80,95,794 ರೂ. ಆಗಿರುತ್ತದೆ. ಅಲ್ಲದೆ 9 ವಾಹನಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.
Comments are closed.