ಕರಾವಳಿ

ಕೇಂದ್ರದ ಅನುದಾನ ಬಳಕೆ ಮಾಡುವಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರು ವಿಫಲ : ಸಂಸದ ನಳಿನ್ ಕಟೀಲ್ ಆರೋಪ

Pinterest LinkedIn Tumblr

ಮಂಗಳೂರು, ಮೇ 4: ಸ್ಮಾರ್ಟ್ ಸಿಟಿ, ಅಮೃತ್ ಯೋಜನೆಯಡಿ ಕೇಂದ್ರದ ಅನುದಾನವನ್ನು ಬಳಕೆ ಮಾಡುವಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದು, ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಿದ್ದಾರೆಯೇ ಹೊರತು ಅನುದಾನವನ್ನು ಸದುಪಯೋಗ ಪಡಿಸಿಕೊಂಡಿಲ್ಲ ಎಂದು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ನಗರಕ್ಕೆ 216 ಕೋಟಿ ರೂ.ಗಳನ್ನು ಕೇಂದ್ರಸರಕಾರ ಮಂಗಳೂರು ನಗರಕೆ ನೀಡಿದೆ. ಅದನ್ನು ವಿನಿಯೋಗಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಾಗಿ ಎಸ್‌ಪಿವಿ ರಚನೆಯಲ್ಲೂ ವಿಳಂಬ ಧೋರಣೆ ತಳೆಯಲಾಗಿತ್ತು. ಯೋಜನೆ ಕುರಿತು ಈವರೆಗೂ ಒಂದೂ ಸಭೆಯನ್ನು ನಡೆಸಲಾಗಿಲ್ಲ.

ಅಮೃತ್ ಯೋಜನೆಯ 185.52 ಕೋಟಿ ರೂ. ಹಣ ಬಳಕೆಯಾಗಿಲ್ಲ. ಅದನ್ನು ಕುಡ್ಸೆಂಪ್ ಬಾಕಿ ಕಾಮಗಾರಿಗೆ ವಿನಿಯೋಗಿಸುವ ಕೆಲಸ ನಡೆಯುತ್ತಿದೆ. ಕೇಂದ್ರ ಸರಕಾರದ ಆವಾಜ್ ಯೋಜನೆಯ ಹಣಕ್ಕೆ ತಮ್ಮ ಬ್ಯಾನರ್ ಹಾಕಿ ಪ್ರಚಾರ ಮಾಡುತ್ತಿದ್ದಾರೆ. ವಿಮಾನ ನಿಲ್ದಾಣ ವಿಸ್ತರಣೆಗೆ 120 ಎಕರೆ ಜಾಗ ಕೇಳಲಾಗಿದ್ದರೂ ಜಾಗ ಒದಗಿಸಿಲ್ಲ. ವಿಶ್ವ ದರ್ಜೆಯ ರೈಲ್ವೇ ನಿಲ್ದಾಣಕ್ಕೂ ನಿವೇಶನ ಒದಗಿಸಲಾಗಿಲ್ಲ ಎಂದು ದೂರಿದರು.

ಮತದ ಬೇಟೆಗಾಗಿ ಕಾಂಗ್ರೆಸ್‌ನಿಂದ ಹಾದಿ ತಪ್ಪಿಸುವ ಕಾರ್ಯ ನಡೆಯುತ್ತಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಾಧನೆ, ಅಭಿವೃದ್ಧಿಯನ್ನು ನೀಡಿದವರ ಹೆಸರನ್ನು ಬಿಟ್ಟು ಕೇಂದ್ರ ಸರಕಾರದ ಯೋಜನೆಗಳನ್ನು ತನ್ನದೆಂದು ಬಿಂಬಿಸುವ ಕಾರ್ಯ ಸ್ಥಳೀಯ ಶಾಸಕರಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ ನಗರಕ್ಕೆ ನಗರೋತ್ಥಾನ ಯೋಜನೆಯಡಿ 200 ಕೋಟಿ ರೂ. ನೀಡಲಾಗಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತವಾಧಿಯಲ್ಲಿ ಕೇವಲ 59 ಕೋಟಿ ರೂ.ಗಳು ಮಾತ್ರವೇ ಬಿಡುಗಡೆಯಾಗಿದ್ದು, ಬಾಕಿ ಹಣ ಶಾಸಕರು ಹಾಗೂ ಉಸ್ತುವಾರಿ ಸಚಿವರ ಒಳಜಗಳದಿಂದ ಖರ್ಚು ಆಗಿಲ್ಲ ಎಂದು ಆಪಾದಿಸಿದರು. ಕಾಂಗ್ರೆಸ್‌ನ ಈ ದುರಾಡಳಿತದಿಂದ ಜನತೆ ರೋಸಿ ಹೋಗಿದ್ದು, ಜಿಲ್ಲೆಯಲ್ಲಿ ಬಿಜೆಪಿ ಪರ ವಾತಾವರಣ ಕಂಡು ಬರುತ್ತಿದೆ. ಎಂಟೂ ಕ್ಷೇತ್ರದಲ್ಲೂ ಬಿಜೆಪಿ ಜಯಗಳಿಸಿದರೆ ಅಚ್ಚರಿ ಇಲ್ಲ ಎಂದು ಅವರು ಹೇಳಿದರು.

ಪಕ್ಷದ ಮುಖಂಡರಾದ ಮೋನಪ್ಪ ಭಂಡಾರಿ, ರುಕ್ಮಾಯ ಪೂಜಾರಿ, ಸುಲೋಚನಾ ಭಟ್ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.