ಕರಾವಳಿ

ಕಥುವಾ ಬಾಲಕಿಯ ಅತ್ಯಾಚಾರ,ಕೊಲೆ ಖಂಡಿಸಿ ಮಂಗಳೂರಿನ ವ್ಯಾಪರಸ್ಥರಿಂದ ಸ್ವಯಂ ಪ್ರೇರಿತ ಬಂದ್ : ಮೀನು ವಹಿವಾಟು ಬಂದ್

Pinterest LinkedIn Tumblr

ಮಂಗಳೂರು, ಎಪ್ರಿಲ್. 23: ಜಮ್ಮು-ಕಾಶ್ಮಿರದ ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ನಗರದ ಸೆಂಟ್ರಲ್ ಮಾರ್ಕೆಟ್ ನ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರು ಹಾಗೂ ಮೀನಿನ ಧಕ್ಕೆಯಲ್ಲಿ ಸೋಮವಾರ ಸ್ವಯಂ ಪ್ರೇರಿತ ಬಂದ್ ನಡೆಸಲಾಯಿತು.

ಹರತಾಳಕ್ಕೆ ಯಾವುದೇ ಸಂಘ ಸಂಸ್ಥೆಗಳು ಕರೆ ನೀಡಿಲ್ಲ. ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ನಡೆಸುತ್ತಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಹರತಾಳಕ್ಕೆ ಪೂರ್ವ ಸಿದ್ಧತೆಯಾಗಿ ವ್ಯಾಪಾರಿಗಳು ರವಿವಾರ ತಮ್ಮ ಅಂಗಡಿಗಳಿಗೆ ಸರಕು ತರಿಸಿಲ್ಲ, ಇದ್ದ ಸರಕನ್ನು ಮಾರಾಟ ಮಾಡಿ ಮುಗಿಸಲು ಸಿದ್ಧತೆ ನಡೆಸಿದ್ದರು. ಸೋಮವಾರವೂ ಸರಕು ತರಿಸದಿರಲು ತಿರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಮೀನು ಮಾರುಕಟ್ಟೆ ಧಕ್ಕೆಯಲ್ಲಿಯೂ ಪ್ರತಿಭಟನೆ:

ಬಾಲಕಿಯ ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ ಸೋಮವಾರ ನಗರದ ಮೀನುಗಾರಿಕಾ ಧಕ್ಕೆಯಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ಮೀನುಗಾರರ ಮುಖಂಡ ಹಮೀದ್ ಕುದ್ರೋಳಿಯವರ ನೇತ್ರತ್ವದಲ್ಲಿ ದಕ್ಕೆಯ ವ್ಯಾಪಾರಸ್ತರು ವ್ಯವಹಾರವನ್ನು ಬಂದ್ ಮಾಡಿ ಮೌನ ಪ್ರತಿಭಟನೆ ನಡೆಸಿದರು.

ಬಾಲಕಿಯ ಹತ್ಯೆಯನ್ನು ಖಂಡಿಸಿ, ಹಳೆ ಬಂದರು ಧಕ್ಕೆಯ ಹಸಿ ಮೀನು ಮಾರಾಟಗಾರರು ಮತ್ತು ಕಮಿಷನ್ ಏಜೆಂಟರ ಸಂಘವು ಹರತಾಳಕ್ಕೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಧಕ್ಕೆಯಲ್ಲಿ ಮೀನು ವಹಿವಾಟು, ವ್ಯವಹಾರ ಸ್ಥಗಿತಗೊಂಡಿದೆ. ಇನ್ನೊಂದೆಡೆ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೋಟುಗಳು ಕೂಡ ಮೀನು ಹಿಡಿಯಲು ಸಮುದ್ರಕ್ಕೆ ಹೋಗದೆ ರವಿವಾರವೇ ದಡ ಸೇರಿವೆ.

Comments are closed.