ಕರಾವಳಿ

ವಾತ, ಪಿತ್ತ, ಜ್ವರ ಕಫ ಎಲ್ಲಾ ಸಮಸ್ಯೆ ನಿವಾರಣೆಗೆ ಈ ಬಳ್ಳಿ ಕಷಾಯ ಸಹಕಾರಿ

Pinterest LinkedIn Tumblr

ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಹುಟ್ಟಿಕೊಳ್ಳುತ್ತದೆ. ಇದರ ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ. ನಮ್ಮ ಮನೆಯ ಅಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಸಸ್ಯವಿದು. ವಾತ ಪಿತ್ತ ಕಪ ಗಳಿಂದಾದ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲಾ ರೀತಿಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿಯಾಗಿದೆ.

ಖಾಲಿ ಹೊಟ್ಟೆಯಲ್ಲಿ ಒಂದೆರಡು ಎಲೆಗಳ ಸೇವನೆ ಅನೇಕ ರೋಗಗಳಿಗೆ ರಾಮಬಾಣ. ಅದರಲ್ಲೂ ದೇಹದ ಸಕ್ಕರೆ ಅಂಶವನ್ನು ಹತೋಟಿಯಲ್ಲಿ ಇಟ್ಟಿರಲು ಹಾಗೂ ನಮಗೆ ತಿಳಿದೋ ತಿಳಿಯದೇ ನಾವು ತಿನ್ನುವ ಆಹಾರದಲ್ಲಿ ಸೇರಿರುವ ವಿಷಕಾರಿ ಅಂಶವನ್ನು ಕಿತ್ತೊಗೆಯಲು ಬಲು ಸಹಕಾರಿ. ಅಲ್ಲದೆ ದೇಹದ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇದಕ್ಕೆ ಹೆಚ್ಚಿನ ಉಪಚಾರ ಬೇಕಾಗಿಲ್ಲ. ಒಂದಿಷ್ಟು ನೀರು, ಮಣ್ಣು, ಬಿಸಿಲು ಸಾಕು. ಬನ್ನಿ ಇದರ ಉಪಯೋಗ ತಿಳಿದುಕೊಳ್ಳೋಣ.

ಹೃದಯ ಶೂಲೆಯಲ್ಲಿ: ಅಮೃತಬಳ್ಳಿಯ ಚೂರ್ಣ ಅರ್ಧ ಟೀ ಚಮಚದಷ್ಟೇ ಒಂದೆರಡು ಮೆಣಸು ಕಾಳಿನ ಪುಡಿ ಸೇರಿಸಿ ಬಿಸಿ ನೀರಿನಲ್ಲಿ ಕದಡಿ ದಿವಸಕ್ಕೆ ಎರಡು ಭಾರಿ ಸೇವಿಸುವುದು.

ಸ್ಮರಣ ಶಕ್ತಿಗೆ: ಶತಾವರಿ ಶುಂಠಿ ವಾಯುವಿಳಂಗ ಬಜೆ ಬ್ರಾಹ್ಮಿ ಅಳಲೆಕಾಯಿ ಉತ್ತರಾಣೆ ಮತ್ತು ಸಮಭಾಗ ಅಮೃತಬಳ್ಳಿ ಸೇರಿಸಿ ನಯವಾದ ಚೂರ್ಣ ಮಾಡಿಟ್ಟುಕೊಳ್ಳುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಸ್ವಲ್ಪ ತುಪ್ಪ ಸೇರಿಸಿ ನೆಕ್ಕುವುದು. ಮೇಲೆ ಕೆಂಪು ಕಲ್ಲುಸಕ್ಕರೆ ಹಾಕಿರುವ ಬಿಸಿ ಹಾಲನ್ನು ಕುಡಿಯುವುದು. ದೂರವಾಣಿ ಸಂಖ್ಯೆಗಳನ್ನಾಗಲಿ ಅಥವಾ 15ರಿಂದ 19ರ ತನಕ ಮಗ್ಗಿಯನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸುವುದು ಕೆಲವೇ ತಿಂಗಳಲ್ಲಿ ಫಲ ದೊರೆಯುವುದು.

ಬಾಯಾರಿಕೆ, ವಾಂತಿ, ವಾಕರಿಕೆ: ಸುಮಾರು 25 ಗ್ರಾಂನಷ್ಟು ಅಮೃತಬಳ್ಳಿಯನ್ನು ಅರೆದು ಶುದ್ಧವಾದ ನೀರು ಹಾಕಿ ಕಾಯಿಸಿ ಕಷಾಯ ಮಾಡಿಟ್ಟುಕೊಳ್ಳುವುದು. ದಿನಕ್ಕೆ ಮೂರು ವೇಳೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದು.

ಮೂತ್ರನಾಳದಲ್ಲಿ ಕಲ್ಲು: ಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಯ ಸಮತೂಕ ನಯವಾಗಿ ಚೂರ್ಣ ಮಾಡಿಟ್ಟುಕೊಳ್ಳುವುದು. 10ಗ್ರಾಂನಷ್ಟು ಚೂರ್ಣವನ್ನು ಶುದ್ಧ ನೀರು ಹಾಕಿ ಕಷಾಯ ಮಾಡಿ ವೇಳೆಗೆ ಒಂದು ಟೀ ಚಮಚದಷ್ಟು ಕುಡಿಸುವುದು.

ಮೈಮೇಲೇಳುವ ಪಿತ್ತದ ಗಂಧೆಗಳು: ಅಮೃತಬಳ್ಳಿಯ ಎಲೆ ಸಾಸಿವೆ ಶ್ರೀಗಂಧದ ಚಕ್ಕೆ ಇವುಗಳ ಸಮತೂಕವನ್ನು ಎಮ್ಮೆಯ ಹಾಲಿನಲ್ಲಿ ಅರೆದು ಮೈಗೆ ಹಚ್ಚುವುದು. ಪಿತ್ತ ವಿಕಾರ ಕಡಿಮೆ ಆಗಿ ಪಿತ್ತದ ಗಂಧೆಗಳು ಮತ್ತು ನೆವೆ ಉರಿ ಶಮನವಾಗುವುದು.

ಹೊಟ್ಟೆ ಉರಿ: ಹಸಿಸೊಪ್ಪಿನ ರಸ 2 ಟೀ ಚಮಚದಷ್ಟು ಸ್ವಲ್ಪ ಓಂಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು.

ವಾತ ಜ್ವರದಲ್ಲಿ: ಅಮೃತಬಳ್ಳಿ ತ್ರಫಲ ಚೂರ್ಣ, ತುಂಗೇಗುಡ್ಡೆ ಕೊತ್ತಂಬರಿ, ಶತಾವರಿ, ಕಳ್ಳಂಗಡಲೆ ಮತ್ತು ಬೇಲದ ಬೇರು ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳುವುದು. ಸ್ವಲ್ಪ ಚೂರ್ಣಕ್ಕೆ ಎರಡು ಬಟ್ಟಲು ನೀರು ಹಾಕಿ ಕಾಯಿಸಿ ಅರ್ಧ ಬಟ್ಟಲು ಕಷಾಯವನ್ನು ಮಾಡಿ ಆರಿಸಿ ಕುಡಿಯುವುದು.

ಬುದ್ಧಿ ಭ್ರಮಣೆಗೆ: ಹಸಿ ಅಮೃತಬಳ್ಳಿಯನ್ನು ತಂದು ತಣ್ಣನೆಯ ಹಾಲಿನಲ್ಲಿ ನುಣ್ಣನೆ ರುಬ್ಬಿ ತಲೆಗೆ ಪಟ್ಟು ಹಾಕುವುದು. ಒಂದೆರಡು ತಾಸುಗಳ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದು.

ದೃಷ್ಟಿಮಾಂದ್ಯದಲ್ಲಿ: ಅಮೃತಬಳ್ಳಿ ತ್ರಿಫಲ ಚೂರ್ಣ, ಹಿಪ್ಪಲಿ ಸಮ ಪ್ರಮಾಣ ಸೇರಿಸಿ ಜಜ್ಜಿ ಕಷಾಯ ಮಾಡುವುದು. ಅರ್ಧ ಬಟ್ಟಲು ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದು.

ಬೊಜ್ಜು ಮತ್ತು ಕೊಬ್ಬು ಕಡಿಮೆ ಆಗಲು, ಆಯಸ್ಸು ಹೆಚ್ಚಲು: ಇದು ಪರಿಣಾಮಕಾರಿ ಔಷಧಿ. ಮೇಲಿನ ಕಷಾಯಕ್ಕೆ ಒಂದು ಗುಲಗಂಜಿಯಷ್ಟು ಲೋಹ ಭಸ್ಮವನ್ನು ಮತ್ತು ಟೀ ಚಮಚ ಜೇನು ತುಪ್ಪವನ್ನು ಕೂಡಿಸಿ ಸೇವಿಸುವುದು. ಸುಮಾರು 40 ದಿವಸ ಅಂಗಸಾಧನೆ, ಕೊಬ್ಬು ರಹಿತ ಆಹಾರ, ತಣ್ಣೀರು ಸ್ನಾನ ಮತ್ತು ದೀರ್ಘ ನಡಿಗೆ ಅಭ್ಯಾಸ ಮಾಡಿಕೊಳ್ಳುವುದು.

ಸ್ತ್ರೀಯರ ರಕ್ತ ಪ್ರದರಕ್ಕೆ: 20ಗ್ರಾಂ ಹಸಿ ಅಮೃತಬಳ್ಳಿಯ ರಸಕ್ಕೆ ಒಂದು ಟೀ ಚಮಚದಷ್ಟು ಸಕ್ಕರೆ ಬೆರೆಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು.

ಉರಿ ಮೂತ್ರದಲ್ಲಿ: ಅಮೃತಬಳ್ಳಿ ನಯವಾದ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಕದಡಿ ದಿವಸಕ್ಕೆ ಎರಡು ಬಾರಿ ಸೇವಿಸುವುದು ಅಥವಾ ಮಜ್ಜಿಗೆಯಲ್ಲಿ ತೆಗೆದುಕೊಳ್ಳುವುದು.

Comments are closed.