ಕರಾವಳಿ

ಟಾರ್ಗೆಟ್ ಗ್ರೂಪ್‌ ಇಲ್ಯಾಸ್ ಹತ್ಯೆ ಪ್ರಕರಣ : ಮತ್ತೋರ್ವ ಸೆರೆ – ಬಂಧಿತರ ಸಂಖ್ಯೆ ಆರಕ್ಕೇರಿಕೆ

Pinterest LinkedIn Tumblr

ಮಂಗಳೂರು, ಎಪ್ರಿಲ್ 18: ನಾಲ್ಕು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಮಂಗಳೂರಿನ ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಳ್ಳಾಲ ಮಾರ್ಗತಲೆ ನಿವಾಸಿ ಪ್ರಸ್ತುತ ಮಂಜೇಶ್ವರ ಪಾವೂರಿನ ಉಮರ್ ನವಾಫ್ ಯಾನೆ ನವಾಫ್ ಯಾನೆ ಮಾಯಾ (25) ಎಂದು ಹೆಸರಿಸಲಾಗಿದೆ. ಆರೋಪಿಯನ್ನು ಪೊಲೀಸರು ಮಹಾಕಾಳಿಪಡ್ಪು ಬಳಿ ಬಂಧಿಸಿ ಆತನಿಂದ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಹಾಗೂ ಎರಡು ತಲವಾರುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿ ಉಮ್ಮರ್ ನವಾಫ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಕೊಲೆ ಯತ್ನ, ಸುಲಿಗೆ, ದರೋಡೆ, ಕಿಡ್ನಾಪ್ ಹೀಗೆ ಒಟ್ಟು ಏಳು ಪ್ರಕರಣಗಳು ಹಾಗೂ ಮಂಜೇಶ್ವರ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿವೆ.

ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್

ಜನವರಿ13ರಂದು ಜಪ್ಪು ಕುಡ್ಪಾಡಿಯ ಅಪಾರ್ಟ್‌ಮೆಂಟ್‌ನಲ್ಲಿ ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಪ್ರಕರಣದಲ್ಲಿ ಈಗಾಗಲೇ ಆರೋಪಿಗಳಾದ ದಾವೂದ್, ಮುಹಮ್ಮದ್ ಸಮೀರ್ ಯಾನೆ ಸಮೀರ್, ಮಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ನಾಚಿ, ರಿಯಾಝ್ ಯಾನೆ ರಿಯಾ ಯಾನೆ ಇಯ್ಯ ಮತ್ತು ನಮೀರ್ ಹಂಝ ಎಂಬವರನ್ನು ಬಂಧಿಸಿದ್ದು, ಆರೋಪಿಗಳು ನ್ಯಾಯಾಂಗ ಬಂಧನಲ್ಲಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರ ಸೂಚನೆಯಂತೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ನಿರೀಕ್ಷಕ ಸಾಯಿನಾಥ ಎಂ. ರಾಣೆ ಅವರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಪತ್ತೆಗೆ ಮಂಗಳೂರು ದಕ್ಷಿಣ ಠಾಣೆಯ ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್. ಮತ್ತು ಪಿಎಸ್‌ಐ ಮಂಜುಳಾ, ಮಂಗಳೂರು ದಕ್ಷಿಣ ಠಾಣೆಯ ಸಿಬ್ಬಂದಿ ಹಾಗೂ ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿ ಸಹಕರಿಸಿದ್ದರು.

Comments are closed.