ಕರಾವಳಿ

ಆಸಿಫಾ ಅತ್ಯಾಚಾರ,ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಎಸ್.ಎಸ್.ಎಫ್ ಆಗ್ರಹ

Pinterest LinkedIn Tumblr

ಮಂಗಳೂರು / ಕಲ್ಮಿಂಜ: ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ 8ರ ಹರೆಯದ ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಎಸ್.ಎಸ್.ಎಫ್ ಕಲ್ಮಿಂಜ ಯುನಿಟ್ ಇದರ ವತಿಯಿಂದ ಕಲ್ಮಿಂಜ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಥಳೀಯ ಖತೀಬ್ ಉಸ್ತಾದ್ ಅಬ್ದುಲ್ ಲತೀಫ್ ಸಅದಿ ಅಲ್-ಅಫ್ಳಲಿ ದೇಶದಲ್ಲಿ ಇಂತಹ ಅಮಾನವೀಯ ಕೃತ್ಯಗಳು ನಿರಂತರ ನಡೆಯುತ್ತಿದ್ದರೂ ಅದರ ಬಗ್ಗೆ ಅಧಿಕೃತರು ತೋರುವ ಅಸಡ್ಡೆ ಮತ್ತು ನಿಷ್ಕ್ರಿಯತೆ ಸಮಾನ ಕೃತ್ಯಗಳು ಸಾರ್ವತ್ರಿಕವಾಗಿ ನಡೆಯಲು ಕಾರಣವಾಗುತ್ತದೆ. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಕಠಿಣ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನು ಇಸ್ಮಾಯಿಲ್ ಸಅದಿ ಉದ್ಘಾಟಿಸಿದರು. ಬದ್ರಿಯ ಜುಮಾ ಮಸ್ಜಿದ್ ಕಲ್ಮಿಂಜ ಅಧ್ಯಕ್ಷರಾದ ಮಹಮ್ಮದ್ ಪೂಡಲ್, ಹಿರಿಯ ನಾಯಕರಾದ ಅಬೂಬಕರ್ ಹಾಜಿ, ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್, ಎಸ್.ಎಸ್.ಎಫ್ ಸೆಕ್ಟರ್ ಕಾರ್ಯದರ್ಶಿ ಮುನಿರ್ ಕಲ್ಮಿಂಜ, ಎಸ್.ಎಸ್. ಎಫ್ ನಾಯಕರಾದ ಖಾದರ್ ಸಅದಿ ಬಟ್ಯಡ್ಕ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಅಬ್ದುಲ್ ರಶೀದ್ ಪೂಡಲ್ ಸ್ವಾಗತಿಸಿದರು. ಹರ್ಷಿದ್ ಕಲ್ಮಿಂಜ ನಿರೂಪಿಸಿ, ಸತ್ತಾರ್ ಮದಕ ವಂದಿಸಿದರು.

Comments are closed.