ಕರಾವಳಿ

ನೀತಿ ಸಂಹಿತೆ ಉಲ್ಲಂಘನೆ ಆರೋಪ : ಕ್ಯಾಂಪ್ಕೋ ಅಧ್ಯಕ್ಷರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

Pinterest LinkedIn Tumblr

ಮಂಗಳೂರು, ಎಪ್ರಿಲ್.11: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕು ಘಟಕದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಸೋಮವಾರ ಸುದ್ದಿಗೋಷ್ಠಿ ನಡೆಸಿ ಅಡಿಕೆ ಕ್ಯಾನ್ಸರ್‌ಕಾರಕವಲ್ಲ ಎಂದು ಹೇಳಿ ಕೇಂದ್ರ ಸಚಿವರ ಹೆಸರನ್ನು ಉಲ್ಲೇಖಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹಾಗಾಗಿ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

ಘಟಕದ ಅಧ್ಯಕ್ಷ ಹಾಗು ಕಾರ್ಪೊರೇಟರ್ ಎ.ಸಿ.ವಿನಯರಾಜ್ ನೇತೃತ್ವದ ಕಾಂಗ್ರೆಸ್ ನಿಯೋಗವು ಚುನಾವಣಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ಕ್ಯಾಂಪ್ಕೋ ಸಂಸ್ಥೆಯು ಸಹಕಾರಿ ಸಂಘವಾಗಿದೆ. ಅದರ ಅಧ್ಯಕ್ಷರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಸುದ್ದಿಗೋಷ್ಠಿ ಕರೆದು ಅಡಿಕೆಯು ಕ್ಯಾನ್ಸರ್‌ ಕಾರಕವಲ್ಲ. ಅದು ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ. ಈ ಬಗ್ಗೆ ಕೇಂದ್ರ ಸಚಿವರಾದ ರಾಧಾಮೋಹನ್ ಸಿಂಗ್ ಮತ್ತು ಜೆ.ಪಿ. ನಡ್ಡ ಅವರಿಗೆ ಸಚಿವ ಅನಂತ ಕುಮಾರ್ ಹೆಗಡೆ ನೇತೃತ್ವದಲ್ಲಿ ವರದಿ ಸಲ್ಲಿಸಿದೆ ಎಂದು ಹೇಳಿದ್ದು, ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದ್ದಾರೆ.

ಚುನಾವಣಾ ಘೋಷಣೆಯಾದ ತಕ್ಷಣ ಕ್ಯಾಂಪ್ಕೋ ಆಡಳಿತ ಮಂಡಳಿಗೆ ಅಡಿಕೆ ಬೆಳೆಗಾರರ ಮೇಲೆ ಪ್ರೀತಿ ಹುಟ್ಟಿದೆ. ಬಿಜೆಪಿಯ ಕುಮ್ಮಕ್ಕಿನಿಂದಲೇ ಕ್ಯಾಂಪ್ಕೋ ಅಧ್ಯಕ್ಷರು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರಕಾರದ ಪರ ಮಾತನಾಡಿದ್ದಾರೆ. ಹಾಗಾಗಿ ಸಂಬಂಧಪಟ್ಟವರ ಮೇಲೆ ಕ್ರಮ ಜರಗಿಸಲು ಒತ್ತಾಯಿಸಿದೆ.

ಕಾಂಗ್ರೆಸ್ ಮುಖಂಡ ಸದಾಶಿವ ಉಳ್ಳಾಲ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎ.ಮುಹಮ್ಮದ್ ಹನೀಫ್, ಕಾರ್ಪೊರೇಟರ್ ಲತೀಫ್ ಕಂದುಕ, ಪ್ರೇಮ್ ಬಲ್ಲಾಳ್ ಭಾಗ್ ನಿಯೋಗದಲ್ಲಿದ್ದರು.

Comments are closed.