ಕರಾವಳಿ

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ದ.ಕ.ಜಿಲ್ಲೆಯಲ್ಲಿ ನಾಳೆ ಮಿಂಚಿನ ನೋಂದಣಿ ಆಂದೋಲನ

Pinterest LinkedIn Tumblr

ಮಂಗಳೂರು ಎಪ್ರಿಲ್ 7  :  ರಾಜ್ಯ ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವ ಅರ್ಹ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಎಪ್ರಿಲ್ 8 ರಂದು ಒಂದು ದಿನದ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಭಾನುವಾರ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಬೂತು ಮಟ್ಟದ ಅಧಿಕಾರಿ ಉಪಸ್ಥಿತರಿರಲಿದ್ದು, ಅಂತಿಮ ಮತದಾರರ ಪಟ್ಟಿಯ ಪ್ರತಿಯನ್ನು ಸಾರ್ವಜನಿಕರ ಮಾಹಿತಿಗೆ ನೀಡಲಿದ್ದಾರೆ.

ಎಲ್ಲಾ ಬೂತುಮಟ್ಟದ ಅಧಿಕಾರಿಯವರು ಎಪ್ರಿಲ್ 8 ರಂದು ಪೂರ್ವಾಹ್ನ 10 ಗಂಟೆಯಿಂದ ಸಾಯಂಕಾಲ 5.30 ಗಂಟೆವರೆಗೆ ಮತಗಟ್ಟೆಯಲ್ಲಿ ಹಾಜರಿದ್ದು, ಅಲ್ಲಿಗೆ ಬರುವ ಸಾರ್ವಜನಿಕರು ತಮ್ಮ ಹೆಸರು ದಿನಾಂಕ: 28-2-2018 ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ ನೊಂದಾಯಿಸಲ್ಪಟ್ಟಿದೆಯೇ ಎಂಬುದನ್ನು ಪರಿಶೀಲನೆಯಿಂದ ದೃಢಪಡಿಸಿಕೊಳ್ಳಬೇಕು. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದಿದ್ದರೆ, ಅವರಿಗೆ ಸ್ಥಳದಲ್ಲಿಯೇ ಫಾರಂ 6 ನ್ನು ನೀಡಿ ಅದನ್ನು ಭರ್ತಿ ಮಾಡಿ ಅವಶ್ಯವುಳ್ಳ ದಾಖಲೆಗಳೊಂದಿಗೆ ಪಡೆಯಲಾಗುವುದು.

ಎಪ್ರಿಲ್ 8 ರಂದು ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ವಿಶೇಷ ನೊಂದಣಿ ಆಂದೋಲನ ನಡೆಯುತ್ತಿದೆ ಎಂಬುದನ್ನು ದೃಢಪಡಿಸಿ ಕೊಳ್ಳಲು, ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಮತಗಟ್ಟೆಗಳಿಗೆ ಅನಿರೀಕ್ಷಿತ ಭೇಟಿ ನೀಡಲಿದ್ದಾರೆ.

ಸಾರ್ವಜನಿಕರು ಈ ಅಪೂರ್ವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.