ಕರಾವಳಿ

ಮಂಗಳೂರಿನಲ್ಲಿ ಕರ್ಕಶ ಹಾರ್ನ್ ಮೂಲಕ ಶಬ್ಧ ಮಾಲಿನ್ಯ : ಬಸ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಡಿಸಿಪಿ ಸೂಚನೆ

Pinterest LinkedIn Tumblr

ಮಂಗಳೂರು, ಎಪ್ರಿಲ್.7: ಮಂಗಳೂರಿನಲ್ಲಿ ಕರ್ಕಶ ಹಾರ್ನ್ ಮೂಲಕ ಶಬ್ಧ ಮಾಲಿನ್ಯವನ್ನುಂಟು ಮಾಡುವ ಬಸ್‌ಗಳ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ತಿಳಿಸಿದರು.

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಕರ್ಕಶ ಹಾರ್ನ್ ಹಾಕುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಈ ಹಿಂದೆ ಹಲವು ಬಾರಿ ಮನವಿ ಮಾಡಲಾಗಿದೆ. ಫೋನ್ ಇನ್ ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾಪ ಮಾಡಿದ್ದರೂ ಸಮಸ್ಯೆಗೆ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಕೆಲವು ಬಸ್‌ಗಳಲ್ಲಿ ಬ್ರೇಕ್ ವ್ಯವಸ್ಥೆಯ ಜತೆ ಹಾರ್ನ್ ಜೋಡಣೆಯಾಗಿರುತ್ತದೆ. ಹಾಗಾಗಿ ಹಾರ್ನ್ ಮಾಡುವ ಉಪಕರಣ ಕೀಳಲು ಹೋದರೆ ಬಸ್ಸಿನ ಎಂಜಿನ್‌ಗೆ ಹಾನಿಯಾಗುತ್ತದೆ ಎಂದು ಟ್ರಾಫಿಕ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ಕರ್ಕಶ ಹಾರ್ನ್ ಬಗ್ಗೆ ಸಾರ್ವಜನಿಕರಿಂದ ಸತತವಾಗಿ ದೂರುಗಳು ಬರುತ್ತಿರುವ ಕಾರಣ ಕರ್ಕಶ ಹಾರ್ನ್‌ಗಳನ್ನು ತೆರವು ಮಾಡಿ. ಅಗತ್ಯವಿದ್ದರೆ ಬಸ್‌ಗಳನ್ನು ಮುಟ್ಟುಗೋಲು ಹಾಕಿ ಎಂದು ಸೂಚನೆ ನೀಡಿದರಲ್ಲದೆ, ವಾಹನಗಳ ಹಾರ್ನ್ ಶಬ್ದ ವಾಣಿಜ್ಯ ಪ್ರದೇಶಗಳಲ್ಲಿ 65 ಡೆಸಿಬಲ್ ಹಾಗೂ ವಸತಿ ಪ್ರದೇಶಗಳಲ್ಲಿ 55 ಡೆಸಿಬಲ್‌ಗಿಂತ ಜಾಸ್ತಿ ಇರಕೂಡದು ಎಂದರು.

ಆಸ್ಪತ್ರೆಗಳು ಮತ್ತು ಶಾಲಾ ಪರಿಸರಗಳನ್ನು ‘ನೋ ಹಾರ್ನ್ ರೆನ್’ಗಳೆಂಬುದಾಗಿ ಈಗಾಗಲೇ ಘೋಷಿಸಲಾಗಿದೆ. ಇನ್ನೂ ಕೆಲವು ಪ್ರದೇಶಗಳಿಗೆ ‘ನೋ ಹಾರ್ನ್ ರೆನ್’ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಸ್ತಾವವಿದ್ದು, ಎಲ್ಲೆಲ್ಲಿ ಈ ರೀತಿ ಮಾಡಬೇಕು ಎಂಬ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದು ಟ್ರಾಫಿಕ್ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಹೇಳಿದರು.

ಟ್ರಾಫಿಕ್ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಕುಮಾರಸ್ವಾಮಿ ಮತ್ತು ಸುನೀಲ್ ಕುಮಾರ್, ಎಸ್ಸೈ ಇರಾವತಿ ಚಂದ್ರಾವಕರ್, ಎಎಸ್ಸೈ ಯೂಸುಫ್, ಎಚ್‌ಸಿ ಪುರುಷೋತ್ತಮ ಉಪಸ್ಥಿತರಿದ್ದರು.

Comments are closed.