ಕರಾವಳಿ

ಅಜೀರ್ಣದಿಂದ ಉಂಟಾದ ಹೊಟ್ಟೆನೋವಿಗೆ ಮಜ್ಜಿಗೆ ಹುಲ್ಲಿನ ಕಷಾಯ ಉತ್ತಮ

Pinterest LinkedIn Tumblr

ಮಜ್ಜಿಗೆ ಹುಲ್ಲು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿದ ಸಸ್ಯ. ಇದರಿಂದ ತಯಾರಿಸುವ ಸುಗಂಧ ತೈಲ ತುಂಬ ಪ್ರಸಿದ್ಧ. ಹೊರ ದೇಶಗಳಿಗೂ ರಫ್ತಾಗುತ್ತದೆ. ಈ ತೈಲವನ್ನು ಸುಗಂಧ ದ್ರವ್ಯಗಳು, ಸಾಬೂನು ಮತ್ತು ಕಾಂತಿವರ್ಧಕಗಳಲ್ಲಿ ಬಳಸಲಾಗುತ್ತದೆ.

ನಿಂಬೆಯ ಪರಿಮಳ ಇರುವುದರಿಂದ ಈ ಹುಲ್ಲನ್ನು `ನಿಂಬೆ ಹುಲ್ಲು~ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದು ಇತರೆ ಹುಲ್ಲುಗಳಂತೆ ಸಹಜವಾಗಿ ಬೆಳೆಯುತ್ತದೆ. ಆದರೆ ಕೇರಳದಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ.

ಮಜ್ಜಿಗೆ ಹುಲ್ಲನ್ನು ಅಡುಗೆಯಲ್ಲೂ ಉಪಯೋಗಿಸುತ್ತಾರೆ. ಇದರಿಂದ ಸಾರು ಮಾಡಬಹುದು. ಸಣ್ಣಗೆ ಹೆಚ್ಚಿ ಸ್ವಲ್ಪ ಎಣ್ಣೆ ಅಥವಾ ತುಪ್ಪದಲ್ಲಿ ಜೀರಿಗೆಯೊಂದಿಗೆ ಹುರಿದು ತೆಂಗಿನ ತುರಿ ಸೇರಿಸಿ ರುಬ್ಬಿ ನಂತರ ಒಂದು ಸೌಟು ಮೊಸರು ಇಲ್ಲವೇ ಮಜ್ಜಿಗೆ ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಗ್ಗರಣೆ ಕೊಟ್ಟರೆ ಊಟಕ್ಕೆ ರುಚಿಯಾದ ತಂಬುಳಿ ರೆಡಿ. ಇದು ಆರೋಗ್ಯಕ್ಕೂ ಒಳ್ಳೆಯದು.

ಟೀ ತಯಾರಿಸುವಾಗ ಮಜ್ಜಿಗೆ ಹುಲ್ಲಿನ ತುಂಡನ್ನು ಸೇರಿಸಿ ಕುದಿಸಿದರೆ ಟೀ ಸುವಾಸನೆಯಿಂದ ಕೂಡಿರುವುದಲ್ಲದೆ ರುಚಿಕರವಾಗಿರುತ್ತದೆ. ಜೀರ್ಣಶಕ್ತಿ ಹೆಚ್ಚುತ್ತದೆ. ನೆಗಡಿ, ಕೆಮ್ಮು, ಗಂಟಲು ನೋವಿದ್ದಲ್ಲಿ ವಾಸಿಯಾಗುತ್ತದೆ. ಮಕ್ಕಳಲ್ಲಿ ಬರುವ ಜ್ವರ, ಅಜೀರ್ಣದಿಂದ ಉಂಟಾದ ಹೊಟ್ಟೆನೋವಿಗೆ ಇದರ ಕಷಾಯ ಉತ್ತಮ ಔಷಧ.

ನೆಲಮಟ್ಟದಲ್ಲಿ ಪೊದೆಯಾಗಿ ಬೆಳೆಯುವ ಮಜ್ಜಿಗೆ ಹುಲ್ಲು ಬಹುವಾರ್ಷಿಕ ಬೆಳೆ. ಎಲ್ಲ ವಿಧದ ಮಣ್ಣಿಗೂ ಹೊಂದಿಕೊಳ್ಳುತ್ತದೆ. ನೀರಾವರಿ ಸೌಲಭ್ಯವಿರುವೆಡೆ ವರ್ಷದ ಯಾವುದೇ ಕಾಲದಲ್ಲಾದರೂ ನಾಟಿ ಮಾಡಬಹುದು. ಬೀಜ ಬಿತ್ತಿ ಅಥವಾ ಬೇರುಗಳಿರುವ ಬುಡದ ಕಾಂಡದ ತುಂಡುಗಳನ್ನು ಊರಿ ಇದನ್ನು ಬೆಳೆಸುತ್ತಾರೆ.ಮದ್ದಿನ ಆಗರವಾದ ಇಂಥ ಮಜ್ಜಿಗೆ ಹುಲ್ಲು ನಿಮ್ಮ ಮನೆಯ ಅಂಗಳದಲ್ಲೂ ಇರಲಿ.

Comments are closed.