ಕರಾವಳಿ

ಸ್ವಾತಂತ್ರ್ಯ ಹೋರಾಟಗಾರ್ತಿ ಕರಾವಳಿಯ ಕಮಲಾದೇವಿ ಚಟ್ಟೋಪಾಧ್ಯಾಯರಿಗೆ ಗೂಗಲ್‌ ಗೌರವ!

Pinterest LinkedIn Tumblr

ಉಡುಪಿ: ಸ್ವಾತಂತ್ರ್ಯ ಹೋರಾಟಗಾರ್ತಿ, ರಂಗಭೂಮಿಯ ಪುನರುತ್ಥಾನಕ್ಕೆ ಶ್ರಮಿಸಿದ ಮಂಗಳೂರು ಮೂಲದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜನ್ಮದಿನವಾದ ಮಂಗಳವಾರ ಅಂತರ್ಜಾಲ ಶೋಧ ಸೇವೆಯಾದ ಗೂಗಲ್‌ ‘ಗೂಗಲ್‌ ಡೂಡಲ್‌’ ರಚಿಸಿ ಗೌರವಿಸಿದೆ.

ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಗೂಗಲ್‌ ಸಂಸ್ಥೆಯಿಂದ ಈ ಗೌರವ ಪಡೆಯುತ್ತಿರುವ ರಾಜ್ಯದ ಪ್ರಥಮ ಕರಾವಳಿಯ ಪ್ರಥಮ ವ್ಯಕ್ತಿ. ಈ ಹಿಂದೆ ರಾಜ್ಯದ ಮೇರುನಟ ಡಾ| ರಾಜ್‌ಕುಮಾರ್‌ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಸಂದರ್ಭಗಳಲ್ಲೂ ಅವರ ಕುರಿತು ಗೂಗಲ್‌ ಡೂಡಲ್‌ ರಚಿಸಿ ಗೌರವ ಸೂಚಿಸಿತ್ತು.

1903, ಏಪ್ರಿಲ್‌ 3ರಂದು ಮಂಗಳೂರಿನಲ್ಲಿ ಜನಿಸಿದ ಕಮಲಾದೇವಿ ಅವರಿಗೆ 14ನೇ ವಯಸ್ಸಿಗೆ ಮದುವೆ ನಡೆಯಿತು. ಎರಡೇ ವರ್ಷಗಳಲ್ಲಿ ವಿಧವೆಯಾದ ಅವರು ಉನ್ನತ ಶಿಕ್ಷಣಕ್ಕಾಗಿ ಲಂಡನ್‌ಗೆ ತೆರಳಿದರು. ಭಾರತಕ್ಕೆ ಮರಳಿದ ನಂತರ 1927ರಲ್ಲಿ ಇಂಡಿಯನ್‌ ನ್ಯಾಷನಲ್ ಕಾಂಗ್ರೆಸ್‌ ಸೇರ್ಪಡೆಯಾದರು.
ಮಹಾತ್ಮ ಗಾಂಧಿ, ನೆಹರೂ, ಸರೋಜಿನಿ ನಾಯ್ಡು, ಇಂದಿರಾ ಗಾಂಧಿ ಅವರೊಂದಿಗೆ ನಿಕಟ ಸಂಪರ್ಕವಿದ್ದ ಕಮಲಾದೇವಿ ನಿರಾಶ್ರಿತರಿಗಾಗಿ ನೆರವಿನ ಹಸ್ತ ನೀಡುವಲ್ಲಿ, ಕೈಕರಕುಶಲ ಕಲೆಯನ್ನು ಉಳಿಸುವಲ್ಲಿ, ಮಹಿಳೆಯರಿಗಾಗಿ ಅಪಾರವಾದ ಕೆಲಸವನ್ನು ಮಾಡಿದ್ದಾರೆ.

ರಾಷ್ಟ್ರೀಯ ನಾಟಕ ಶಾಲೆ, ಸಂಗೀತ ನಾಟಕ ಅಕಾಡೆಮಿ ಸೇರಿ ಅನೇಕ ಸಂಸ್ಥೆಗಳ ಸ್ಥಾಪನೆಯಲ್ಲಿ ಕಮಲಾದೇವಿ ಶ್ರಮಿಸಿದ್ದಾರೆ.

ಸಮುದಾಯ ಅಭಿವೃದ್ಧಿ ಸೇವಾ ಕಾರ್ಯಗಳಿಗಾಗಿ ಭಾರತೀಯ ಸಹಕಾರ ಸಂಘದ ಸ್ಥಾಪಕಿ ಮತ್ತು ಅಧ್ಯಕ್ಷೆ ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಗೆ 1966ರಲ್ಲಿ ರೇಮನ್‌ ಮ್ಯಾಗ್ಸೇಸೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್‌(1974), ಪದ್ಮಭೂಷಣ(1955), ಪದ್ಮವಿಭೂಷಣ(1987) ಸೇರಿ ಅನೇಕ ಪ್ರಶಸ್ತಿಗಳು ಸಂದಿವೆ.

Comments are closed.