ಕರಾವಳಿ

ರಾಜ್ಯವನ್ನೇ ಬೆಚ್ಚಿಬೀಳಿಸಿದ ಉಡುಪಿ ಡಿಸಿ, ಎಸಿ ಮೇಲೆ ಹಲ್ಲೆ ಪ್ರಕರಣಕ್ಕೆ 1 ವರ್ಷ

Pinterest LinkedIn Tumblr

ಕುಂದಾಪುರ: ತಾಲೂಕಿನ ಕಂಡ್ಲೂರು ಎಂಬಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ ನಡೆಸಲು ತೆರಳಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣ ನಡೆದು ಎಪ್ರಿಲ್ ೨ಕ್ಕೆ ಒಂದು ವರ್ಷವಾಗಿದ್ದು ರಾಜ್ಯವನ್ನೇ ಬೆಚ್ಚಿಬೀಳಿಸಿದ ಪ್ರಕರಣ ಇದಾಗಿತ್ತು. ಅಧಿಕಾರಿಗಳಿಗೆ ಕಾಂಗ್ರೆಸ್ ಸರಕಾರದಲ್ಲಿ ಭದ್ರತೆಯಿಲ್ಲ ಎಂಬ ಆರೋಪವನ್ನು ಸರಕಾರ ಎದುರಿಸಿತ್ತು.

ಕಳೆದ ವರ್ಷದ ಎ. 2ರ ಮಧ್ಯರಾತ್ರಿ ಖಚಿತ ಮಾಹಿತಿ ಮೇರೆಗೆ ಸುಮಾರು 12 ಗಂಟೆಯ ವೇಳೆಗೆ ಕಂಡ್ಲೂರು ಸೇತುವೆ ಬಳಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಪ್ರದೇಶಕ್ಕೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಹಾಗೂ ಅಂದಿನ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಶಿಲ್ಪಾ ನಾಗ್‌, ಅಂಪಾರು ಗ್ರಾಮ ಲೆಕ್ಕಿಗ ಕಾಂತರಾಜು ದಾಳಿ ನಡೆಸಿದ್ದು ಇವರ ಮೇಲೆ ಮರಳು ದಂಧೆಕೋರರೌ ಹಲ್ಲೆ ನಡೆಸಿದ್ದರು. ಈ ಘಟನೆ ಸಂಬಂಧ ಉಡುಪಿಯ ನಗರ ಪೊಲೀಸ್‌ ಠಾಣೆಯಲ್ಲಿ ಡಿಸಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. 50 ಮಂದಿಯ ವಿರುದ್ಧ ದೂರು ನೀಡಿದ್ದು, ಅವರಲ್ಲಿ 26 ಮಂದಿಯನ್ನು ಬಂಧಿಸಲಾಗಿತ್ತು. ಉತ್ತರ ಪ್ರದೇಶ ಮೂಲದ ಐವರನ್ನು ಗಡಿಪಾರು ಮಾಡಲು ಆದೇಶಿಸಲಾಗಿತ್ತು.

ಇನ್ನೂ ನಿಂತಿಲ್ಲವೇ ಅಕ್ರಮ?
ಈಗ ಕರಾವಳಿ ತೀರದ ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಅನುಮತಿ ಇದ್ದರೂ, ನಾನ್‌ ಸಿಆರ್‌ಝಡ್‌ ವಲಯದಲ್ಲಿ ಮರಳು ತೆಗೆಯಲು ಅನುಮತಿ ಇಲ್ಲ. ಆದರೂ ಕುಂದಾಪುರ ಭಾಗದಲ್ಲಿ ಈಗಲೂ ನಿರಾತಂಕವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಡಿಸಿ, ಎಸಿ ಮೇಲಿನ ಹಲ್ಲೆ ಪ್ರಕರಣದ ಬಳಿಕ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತಂತೆ 40ಕ್ಕೂ ಹೆಚ್ಚು ದೂರುಗಳು ಬಂದಿವೆ. ದೂರು ಬಂದ ಕಡೆಗಳಲ್ಲೆಲ್ಲ ದಾಳಿ ನಡೆಸಲಾಗಿದೆ, ಮೊಳಹಳ್ಳಿ, ಅಂಪಾರು, ಉಳ್ಳೂರು-74 ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಗಣಿ ಮತ್ತು ಭೂ-ವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್‌ ತಿಳಿಸಿದ್ದಾರೆ.

Comments are closed.