ಕರಾವಳಿ

ತತ್ವ ಸಿದ್ಧಾಂತಗಳ ಮೂಲಕ ಶಾಶ್ವತವಾದ ಬೆಳಕನ್ನು ತೋರಿಸಿದವರು ಭಗವಾನ್ ಮಹಾವೀರ : ಬಿ.ಪಿ. ಸಂಪತ್ ಕುಮಾರ್

Pinterest LinkedIn Tumblr

ಮಂಗಳೂರು, ಮಾರ್ಚ್.30: ದ.ಕ. ಜಿಲ್ಲಾಡಳಿತದ ಆಶ್ರಯದಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಗುರುವಾರ ನಗರದ ಬಜಿಲಕೇರಿಯ ಜೈನಬಸದಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಬಿ.ಪಿ. ಸಂಪತ್ ಕುಮಾರ್ ಅವರು, ಭಗವಾನ್ ಮಹಾವೀರ ವಿಶ್ವಭಾತೃತ್ವ ಹಾಗೂ ಸಮಾನತೆಯನ್ನು ಪ್ರತಿಪಾದಿಸಿದವರು ಹಾಗೂ ಅದನ್ನು ಸಮಾಜಕ್ಕೆ ಬೋಧಿಸಿದವರು ಎಂದು ಹೇಳಿದರು.

ತಮ್ಮ 30ನೇ ವಯಸ್ಸಿನಲ್ಲಿ ಸನ್ಯಾಸವನ್ನು ಸ್ವೀಕರಿಸಿ, 12 ವರ್ಷಗಳ ದೀರ್ಷ ತಪಸ್ಸಿನ ಬಳಿಕ ಮತ್ತೆ ಸಮಾಜಕ್ಕೆ ಹಿತ ಬೋಧನೆಯನ್ನು ಮಾಡಿದವರು ಮಹಾವೀರರು. ನೊಂದವರಿಗೆ ತತ್ವ ಸಿದ್ಧಾಂತಗಳ ಮೂಲಕ ಶಾಶ್ವತವಾದ ಬೆಳಕನ್ನು ತೋರಿಸಿದ ಅವರ ಸಂದೇಶ ಸಾರ್ವಕಾಲಿಕ ಎಂದವರು ಹೇಳಿದರು.

ಮಹಾವೀರ ಜಯಂತಿ ಅಂಗವಾಗಿ ಬಸದಿಯಲ್ಲಿ ಬೆಳಗ್ಗೆ 7.30ರಿಂದ ಭಗವಾನ್ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ಅಗ್ರೋದಕ ಮೆರವಣಿಗೆ ಹಾಗೂ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಯಿತು.

ಜೈನ ಸೊಸೈಟಿ, ಜೈನ ಮಿಲನ್, ಯುವ ಜೈನ ಮಿಲನ ಹಾಗೂ ಜೈನ ಬಾಂಧವರ ಸಹಕಾರದಲ್ಲಿ ನಡೆದ ಮಹಾವೀರ ಜಯಂತಿಯ ಸಭಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಕಸಪಾ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಜೈನ ಸೊಸೈಟಿ ಅಧ್ಯಕ್ಷ ಎಲ್.ಡಿ. ಬಲ್ಲಾಳ್, ಉಪಾಧ್ಯಕ್ಷ ಸುರೇಶ್ ಬಲ್ಲಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಚಂದ್ರಹಾಸ ರೈ ಮೊದಲಾದವರು ಉಪಸ್ಥಿತರಿದ್ದರು. ಜೈನ ಸೊಸೈಟಿ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿದರು.

Comments are closed.