ಕರಾವಳಿ

ಬರ ಪರಿಹಾರ ಸೇರಿದಂತೆ ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ : ಪ್ರಿಯಾಂಕ ಚತುರ್ವೇದಿ ಆರೋಪ

Pinterest LinkedIn Tumblr

ಮಂಗಳೂರು, ಮಾರ್ಚ್. 30: ಕೇಂದ್ರ ಸರಕಾರವು ಬರ ಪರಿಹಾರ ವಿತರಣೆ ಸೇರಿದಂತೆ ಹಲವಾರು ವಿಷಯಗಳಲ್ಲಿ ರಾಜ್ಯ ಸರಕಾರದ ಜತೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಎಐಸಿಸಿ ವಕ್ತಾರೆ ಹಾಗೂ ಪಕ್ಷದ ಸಂವಹನ ವಿಭಾಗದ ಸಂಚಾಲಕಿ ಪ್ರಿಯಾಂಕ ಚತುರ್ವೇದಿ ಆರೋಪಿಸಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯವು 2017ರಲ್ಲಿ ಹಿಂದೆಂದೂ ಕಂಡಿರದ ಬರವನ್ನು ಎದುರಿಸಬೇಕಾಯಿತು. ಈ ಸಂದರ್ಭ ಕೇಂದ್ರ ಸರಕಾರ ಒಂದಿಷ್ಟಾದರೂ ಕಾಳಜಿಯನ್ನು, ಕನಿಕರವನ್ನು ರಾಜ್ಯದ ಬಗ್ಗೆ ತೋರಿಸಬಹುದಿತ್ತು. ಅದಾಗದಿದ್ದರೂ ಬರಪರಿಹಾರ ವಿತರಣೆಯಲ್ಲಾದರೂ ಸಮಾನತೆಯನ್ನು ತೋರ್ಪಡಿಸಬಹುದಿತ್ತು. ಆದರೆ ಕೇಂದ್ರ ಸರಕಾರವು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದೆ ಎಂಬ ಕಾರಣಕ್ಕಾಗಿಯೇ ಬರದಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಮಲತಾಯಿ ಧೋರಣೆ ಅನುರಿಸಿದೆ ಎಂದು ಆರೋಪಿಸಿದರು.

ಕೇಂದ್ರವು ಕಳೆದ ವರ್ಷ ಬರ ಪರಿಹಾರ ವಿತರಣೆಗೆ ಸಂಬಂಧಿಸಿ ಬಿಜೆಪಿ ಆಡಳಿತ ಹೊಂದಿರುವ ರಾಜ್ಯಗಳಾದ ಮಹಾರಾಷ್ಟ್ರಕ್ಕೆ 8195 ಕೋಟಿ ರೂ., ಗುಜರಾತ್‌ಗೆ 3895 ಕೋಟಿ ರೂ., ರಾಜಸ್ತಾನ 2153 ಕೋಟಿ ರೂ. ಪರಿಹಾರ ಧನವನ್ನು ಬಿಡುಗಡೆ ಮಾಡಿತ್ತು. ಆದರೆ ಕರ್ನಾಟಕ್ಕೆ ನೀಡಿದ್ದು, 1435.95 ಕೋಟಿ ರೂ. ಮಾತ್ರ. ಒಡೆದು ಆಳುವ ನೀತಿಯನ್ನು ದೇಶದೆಲ್ಲೆಡೆ ಅನುಸರಿಸುತ್ತಿರುವ ಬಿಜೆಪಿಯ ಈ ಅಭಿವೃದ್ಧಿ ಬಗೆಗಿನ ತಾತ್ಸಾರದ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ.

ಬಿಜೆಪಿ ತನ್ನ ಬೆಳವಣಿಗೆಗಾಗಿ ದೇಶದ ಶಾಂತಿಯನ್ನು ಬಲಿಕೊಡುತ್ತಿದೆ. ಅಭಿವೃದ್ಧಿಗೆ ಒತ್ತು ನೀಡದೆ, ದೇಶವನ್ನು ವಿಭಜಿಸಿ ಆಳುವತ್ತ ಬಿಜೆಪಿ ಸರಕಾರ ಹೆಚ್ಚಿನ ಆಸಕ್ತಿ ವಹಿಸಿದೆ. ಇದಕ್ಕಾಗಿ ದೇಶದ ಜನರ ಮನಸ್ಸಿನಲ್ಲಿ ದ್ವೇಷವನ್ನು ತುಂಬುತ್ತಿದೆ ಎಂದು ಅವರು ಹೇಳಿದರು.

ರಾಜ್ಯಸಭಾ ಪ್ರತಿನಿಧಿಯಾಗಿ ಸಂಸತ್ತಿಗೆ ಕನ್ನಡೇತರರನ್ನು ಆಯ್ಕೆ ಮಾಡಿದೆ. ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಅರ್ಹ ಕನ್ನಡ ಪ್ರತಿನಿಧಿ ಇಲ್ಲವೇ ? ಮಹಾದಾಯಿ ವಿಷಯವನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸುವಂತೆ ಹಲವಾರು ಪತ್ರಗಳನ್ನು ಮುಖ್ಯಮಂತ್ರಿ ಬರೆದರೂ, ಆದರೆ ಪ್ರಧಾನಿ ಮೋದಿಯವರು ಇದಕ್ಕೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ ಯಾಕೆ ? ಐಬಿಪಿಎಸ್ ಪರೀಕ್ಷೆಯನ್ನು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾತ್ರವೇ ಬರೆಯಲು ಅವಕಾಶ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳನ್ನು ಕಡೆಗಣಿಸಲಾಗಿದೆ.

ಕರ್ನಾಟಕದಲ್ಲಿ ತಲೆ ಎತ್ತಬೇಕಾಗಿದ್ದ ಸಿಆರ್‌ಪಿಎಫ್ ಮುಖ್ಯ ಕಚೇರಿಯನ್ನು ಈಗಾಗಲೇ ಐದು ಕೇಂದ್ರಗಳನ್ನು ಹೊಂದಿರುವ ಉತ್ತರ ಪ್ರದೇಶಕ್ಕೆ ವರ್ಗಾಯಿಸಿದ್ದಾದರೂ ಏಕೆ ? ಉತ್ತರ ಪ್ರದೇಶದಲ್ಲಿ ಆ ಕೇಂದ್ರ ತೆರೆಯಲು ಇನ್ನೂ ಜಾಗವನ್ನೇ ಗುರುತಿಸಲಾಗಿಲ್ಲ. ಈ ರೀತಿಯ ತಾರತಮ್ಯಗಳನ್ನು ಕೇಂದ್ರ ಸರಕಾರ ಯಾಕೆ ನಡೆಸುತ್ತಿದೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಕೇಂದ್ರ ಸರಕಾರ ದೇಶದ ತೆರಿಗೆ ಪಾವತಿಯಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿರುವ ಕರ್ನಾಟಕದ ಬಗ್ಗೆ ಈ ರೀತಿ ನಿರ್ಲಕ್ಷ್ಯ ಯಾಕೆ ಎಂಬ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉತ್ತರಿಸಬೇಕು ಎಂದವರು ಆಗ್ರಹಿಸಿದರು.

ಕರ್ನಾಟಕ ಸರಕಾರ 2017ರಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿನ 8165 ಕೋಟಿ ರೂ.ಗಳ ರೈತರ ಸಾಲಮನ್ನಾ ಘೋಷಣೆ ಮಾಡಿತು. ರೈತರ ತಲಾ 50,000 ರೂ.ವರೆಗಿನ ಸಾಲ ಮನ್ನಾ ಆಗಿ ಇದರಿಂದ 22,27,506 ರೈತರು ಪ್ರಯೋಜನ ಪಡೆದರು. ಇದೇ ವೇಳೆ ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರಿಗೂ ಈ ಪ್ರಯೋಜನವನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ನೆರವು ಕೋರಿದಾಗ ಕೇಂದ್ರ ಸರಕಾರ ಮೌನವಾಗಿದ್ದು ಯಾಕೆ ಎಂಬ ಪ್ರಶ್ನೆಗೂ ಕೇಂದ್ರ ಸರಕಾರ ಉತ್ತರಿಸಬೇಕಾಗಿದೆ ಎಂದು ಅವರು ಹೇಳಿದರು. ಮೇಯರ್ ಭಾಸ್ಕರ ಮೊಯ್ಲಿ, ಇಬ್ರಾಹೀಂ ಕೋಡಿಜಾಲ್, ಶಾಲೆಟ್ ಪಿಂಟೋ ಹಾಗೂ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ವರದಿ ಕೃಪೆ : ವಾಭಾ

Comments are closed.