ಕರಾವಳಿ

ಗರ್ಭಿಣಿ ಕೊಲೆಗೆ ನ್ಯಾಯ ಕೊಡಿಸಿದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ್‌ಗೆ ಗೋಪಾಡಿ ಗ್ರಾಮಸ್ಥರಿಂದ ‘ಗ್ರಾಮ ಗೌರವ’

Pinterest LinkedIn Tumblr

ಕುಂದಾಪುರ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಯಾವುದೇ ಶುಲ್ಕ ಪಡೆಯದೆ ಕೊಲೆಯಾದ ಇಂದಿರಾ ಅವರ ಬಡ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ್ ಅವರ ಕಾರ್ಯವೈಖರಿ ಮಹತ್ತರವಾಗಿದ್ದು ಅವರಿಗೆ ಗ್ರಾಮ ಗೌರವದ ಮೂಲಕ ಕೃತಜ್ಞತೆ ಸಲ್ಲಿಸುವುದು ನಿಜಕ್ಕೂ ಶ್ಲಾಘನೀಯ ವಿಚಾರ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ, ಉದ್ಯಮಿ ಆನಂದ ಸಿ. ಕುಂದರ್ ಅಭಿಪ್ರಾಯಪಟ್ಟರು.

ಕುಂದಾಪುರ ತಾಲೂಕಿನ ಪಡುಗೋಪಾಡಿಯ ಶಾಲೆ ವಠಾರದಲ್ಲಿ ಗೋಪಾಡಿ ಗ್ರಾಮಸ್ಥರ ವತಿಯಿಂದ ಆಯೋಜಿಸಲಾದ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಅವರಿಗೆ ಗ್ರಾಮ ಗೌರವ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ನ್ಯಾಯವೇ ದೇವರು ಎಂಬ ನಂಬಿಕೆ ನಮ್ಮದು. ಸತ್ಯ ಹಾಗೂ ಧರ್ಮದ ಮೂಲಕ ನ್ಯಾಯ ಪಡೆಯಲು ಸಾಧ್ಯವಿದೆ. ಭಾರತೀಯ ಪರಂಪರೆಯಲ್ಲಿ ಕಾನೂನು ವ್ಯವಸ್ಥೆಯನ್ನು ನಾಜೂಕಾಗಿ ಅಣಿಗೊಳಿಸಲಾಗಿದೆ. ನಿರಪರಾಧಿಗೆ ಶಿಕ್ಷೆಯಾಗದಂತೆ ಕಂಡುಕೊಳ್ಳಲಾಗಿದೆ. ಎಲ್ಲಾ ಸಮತೋಲನ ಕಾಯ್ದುಕೊಂಡು ನಿಜವಾದ ಅಪರಾಧಿಗೆ ಶಿಕ್ಷೆಯಾಗಲು ದೇವರ ಸಂಕಲ್ಪವೂ ಅಗತ್ಯವಿದೆ ಎಂದರು.

ಕುಂದಾಪುರ ಗ್ರಾಮಾಂತರ ಠಾಣೆ ಉಪನಿರೀಕ್ಷಕ ಶ್ರೀಧರ್ ನಾಯ್ಕ್ ಮಾತನಾಡಿ, ಅಪರಾಧ ಚಟುವಟಿಕೆಗಳು ನಡೆದಾಗ ಸಾಕ್ಷಿಗಳು ಹಾಳಾಗದಂತೆ ಸ್ಥಳೀಯರು ಎಚ್ಚರಿಕೆ ವಹಿಸಬೇಕಿದೆ. ಇದರಿಂದ ಸಾಕ್ಷಿಗಳನ್ನು ಪೊಲೀಸರು ಕಲೆಹಾಕಿ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲು ಸಾಧ್ಯವಿದೆ. ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಯಾರೂ ಹಿಂದೇಟು ಹಾಕಬಾರದು ಎಂದು ಕಾನೂನು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ಅವರನ್ನು ಗೋಪಾಡಿ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ಇಂದಿರಾ ಕೊಲೆಗಾರ ಪ್ರಶಾಂತನನ್ನು ಶೀಘ್ರ ಬಂಧಿಸುವಲ್ಲಿ ಯಶಸ್ವಿಯಾದ ಕುಂದಾಪುರ ಪೊಲೀಸ್ ಠಾಣೆ ಹೆಡ್‌ಕಾನ್ಸ್‌ಟೆಬಲ್ ವೆಂಕಟರಮಣ ಅವರನ್ನು ಗುರುತಿಸಲಾಯಿತು.

ಈ ಸಂದರ್ಭದಲ್ಲಿ ಪತ್ರಕರ್ತ ಸುಧಾಕರ ನಂಬಿಯಾರ್ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಗೌರವ ಕಾರ್ಯಕ್ರಮ ಸಂಯೋಜಿಸಿದ ಸಮಾಜ ಸೇವಕ ಗಣೇಶ್ ಪುತ್ರನ್ ಪ್ರಸ್ತಾವನೆಗೈದರು. ಬಾಬಣ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶೇಷಗಿರಿ ಸನ್ಮಾನ ಪತ್ರ ವಾಚಿಸಿದರು. ಆಕಾಶವಾಣಿ ಕಲಾವಿದ ಗಣೇಶ್ ಗಂಗೊಳ್ಳಿ ವಂದಿಸಿದರು.

ಮೃತ ಇಂದಿರಾಳ ಪುತ್ರನ ಮುಂದಿನ ವಿದ್ಯಾಭ್ಯಾಸಕ್ಕೆ ಗೀತಾನಂದ ಫೌಂಡೇಶನ್ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಲ್ಲದೇ ಜೊತೆಗೆ ಆತನ ಉದ್ಯೋಗಕ್ಕೂ ಸಹಾಯ ಮಾಡಲಾಗುತ್ತದೆ.
-ಆನಂದ ಸಿ. ಕುಂದರ್ (ಉದ್ಯಮಿ)

ನ್ಯಾಯಾಧೀಶರೇ ಸಾಕ್ಷಿ ನುಡಿದಿದ್ದರು!
ಸನ್ಮಾನ ಸ್ವೀಕರಿಸಿ ಮಾತನಾಡಿದ ರವಿಕಿರಣ ಮುರ್ಡೇಶ್ವರ್ ಅವರು ಜನರಿಗೆ ಇಂದಿರಾ ಪ್ರಕರಣವು ನ್ಯಾಯಾಲಯದಲ್ಲಿ ಸಾಗಿದ ಬಗ್ಗೆ ಎಳೆ‌ಎಳೆಯಾಗಿ ವಿವರಿಸಿದರು. ಕೊಲೆಗಾರ ಪ್ರಶಾಂತ್ ತಾನು ಕೊಲೆ ಮಾಡಿಲ್ಲ, ಕೇವಲ ಕಳವು ಮಾಡಲು ಇಂದಿರಾ ಮನೆಗೆ ತೆರಳಿದ್ದೆ. ಕೊಲೆ ಮಾಡಿದ್ದು ಇತರೆ ಮೂವರು ಎಂದು ಉಡುಪಿ ನ್ಯಾಯಾಧಿಶರ ಎದುರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು ಅದನ್ನು ನ್ಯಾಯಾಧೀಶರು ದಾಖಲಿಸಿಕೊಂಡಿದ್ದರು. ಸುಮಾರು  23 ಸಾಕ್ಷ್ಯಾಧಾರಗಳ ವಿಚಾರಣೆಯಲ್ಲಿ 23ನೇ ಸಾಕ್ಷಿಯಾಗಿ ಉಡುಪಿಯ ಅಂದಿನ ಮಹಿಳಾ ನ್ಯಾಯಾಧೀಶರು ಕುಂದಾಪುರ ನ್ಯಾಯಾಲಯಕ್ಕೆ ಹಾಜಾರಾಗಿ ಪ್ರಶಾಂತ್ ವಿರುದ್ಧ ಸಾಕ್ಷಿ ನುಡಿದಿದ್ದು ಪ್ರಕರಣದ ಗಂಭೀರತೆಗೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.

(ಚಿತ್ರ,ವರದಿ- ಯೋಗೀಶ್ ಕುಂಭಾಸಿ)

Comments are closed.