ಕರಾವಳಿ

ಹನ್ನೆರಡು ವರ್ಷಗಳ ಹಿಂದಿನ ಪ್ರಕರಣ :ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಆರೋಪಿಗಳ ಖುಲಾಸೆ

Pinterest LinkedIn Tumblr

ಮಂಗಳೂರು,ಮಾರ್ಚ್,29: ಹನ್ನೆರಡು ವರ್ಷಗಳ ಹಿಂದೆ ಕುಳಾಯಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಅವರ ಕೊಲೆ ಪ್ರಕರಣ ಆರೋಪಿಗಳನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದೋಷಮುಕ್ತಗೊಳಿಸಿ ಬುಧವಾರ ತೀರ್ಪು ನೀಡಿದೆ.

ನವಾಝ್, ನೌಷಾದ್, ಶಾಕಿರ್, ಮುಹಮ್ಮದ್ ಅಝೀಝ್, ಮುಹಮ್ಮದ್ ರಫೀಕ್, ಅಬ್ದುಲ್ ಖಾದರ್ ಅಲಿ, ಪಿ.ಕೆ.ಅಯ್ಯೂಬ್, ಮುಹಮ್ಮದ್ ಅಶ್ರಫ್, ಫಾತಿಮಾ ರೊಹ್ರಾ, ಸಲೀಂ, ಖಲಂದರ್ ಬಜ್ಪೆ, ರಹ್ಮತ್ ಖಲಂದರ್. ಅಝೀಝ್, ನಿಝಾಮುದ್ದೀನ್, ದಾದ ಮುಹಮ್ಮದ್, ಅಫ್ರೋಝ್, ನಝೀರ್, ಹುಸೈನ್ ಅವರನ್ನು ನ್ಯಾಯಾಲಯವು ದೋಷಮುಕ್ತಗೊಳಿಸಿ ಖುಲಾಸೆಗೊಳಿಸಿದೆ.

ಪ್ರಕರಣದಲ್ಲಿ 23 ಆರೋಪಿಗಳನ್ನು ಗುರುತಿಸಲಾಗಿತ್ತು. ಬುಲೆಟ್ ಸುಧೀರ್ ಯಾನೆ ಆತಿಕ್ ಮತ್ತು ಮುಲ್ಕಿ ರಫೀಕ್ ಎನ್‌ಕೌಂಟರ್‌ನಿಂದ ಮೃತಪಟ್ಟಿದ್ದಾರೆ. ಮೂಡೂರು ಯೂಸುಫ್ ಜೈಲಿನಲ್ಲಿ ಕೊಲೆಯಾಗಿದ್ದರೆ, ಕಬೀರ್‌ರನ್ನು ಗುರುಪುರ ಬಳಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಒಟ್ಟು 72 ಸಾಕ್ಷಿಗಳ ವಿಚಾರಣೆ ನಡೆದಿತ್ತು.

ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಮುಲ್ಕಿ ನಿವಾಸಿ ಸುಖಾನಂದ ಶೆಟ್ಟಿ ಸುರತ್ಕಲ್ ಸಮೀಪದ ಕುಳಾಯಿಯಲ್ಲಿ ‘ಮಾರ್ಬಲ್ಸ್ ಟ್ರೇಡರ್ಸ್‌’ ಅಂಗಡಿನ್ನು ನಡೆಸುತ್ತಿದ್ದರು.

2006ರ ಡಿ.1ರಂದು ಗುಂಪೊಂದು ಅಂಗಡಿಗೆ ನುಗ್ಗಿ ಸುಖಾನಂದ ಶೆಟ್ಟಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಗಂಭೀರ ಗಾಯಗೊಂಡಿದ್ದ ಸುಖಾನಂದ ಶೆಟ್ಟಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿಗಳಾದ ನಾರಾಯಣ ಬಿ., ನ್ಯಾಯವಾದಿಗಳಾದ ಅಝೀಂ ಹಫೀಝ್. ಹಸೀನಾ ರುಬಿಯಾ, ನುಶ್ರತ್ ಜಹಾನ್, ಸಮೀರ್ ಖಾಸಿಂಜಿ, ಮನೋಜ್ ಕುಮಾರ್ ವಾದಿಸಿದ್ದರು.

Comments are closed.