ಕರಾವಳಿ

ಬೈಂದೂರಿನ ಮೂರೂರು ಕಪ್ಪಾಡಿ ಶಾಲೆಗೆ ನೂತನ ‘ಕಟ್ಟಡ ಭಾಗ್ಯ’!

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮಪಂಚಾಯತ್ ವ್ಯಾಪ್ತಿಯ ಮೂರೂರು ಕಪ್ಪಾಡಿ ಶಾಲೆಗೆ ನೂತನ ಕಟ್ಟಡ ಭಾಗ್ಯ ಸಿಕ್ಕಿದೆ. ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಶಿಥಿಲಗೊಂದ ಕಟ್ಟಡದ ಮೇಲ್ಚವಣಿ ಕುಸಿದು ವರಗಳ ಕಾಲ ಶಾಲೆಗೆ ವಿದ್ಯಾರ್ಥಿಗಳೇ ಬಂದಿರಲಿಲ್ಲ. ಸದ್ಯ ಸುಮಾರು 13 ಲಕ್ಷ ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು ಅದರ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.

ಶಾಲೆಯ ನೂತನ ಕಟ್ಟಡವನ್ನು ಜಿಲ್ಲಾ ಪಂಚಾಯತ್ ಸದಸ್ಯ ಶಂಕರ್ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಂಗ್ಲ ಮಾಧ್ಯಮದ ಪರಿಣಾಮ ಈ ಶಾಲೆಯ ಮೇಲೆ ಬೀಳದ ಕಾರಣ ಇನ್ನೂ ಇಲ್ಲಿ ಮಕ್ಕಳ ಸಂಖ್ಯೆ ಉತ್ತಮವಾಗಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಬರುವ ಈ ಶಾಲೆಗೆ ಬೇಕಾದ ಮೂಲ ಸೌಕರ್ಯ ಒದಗಿಸಬೇಕಿದೆ. ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಜನಪ್ರತಿನಿಧಿಗಳು ಹಾಗೂ ಸಂಘಟನೆ ಮೂಲಕವಾಗಬೇಕಿದೆ ಎಂದರು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಪಂಚಾಯತ್ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸರಕಾರಿ ಶಾಲೆಗಳನ್ನು ಉನ್ನತೀಕರಿಸಲು ಸರಕಾರ ಹತ್ತಾರು ಯೋಜನೆಗಳನ್ನು ನೀಡಿದೆ. ಶಾಲಾಭಿವ್ರದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘಗಳ ಮೂಲಕ ಶಾಲೆಯ ಬೇಕುಬೇಡಗಳನ್ನು ಪರಿಹರಿಸಲು ಸಾಧ್ಯವಿದೆ. ಅಲ್ಲದೇ ಕನ್ನಡ ಮಾಧ್ಯಮ ಶಾಲೆಗಳನ್ನು ದತ್ತು ಪಡೆಯಲು ಅವಕಾಶವಿದೆ. ಊರಿನ ಬಲಿಷ್ಟ ಸಂಘಟನೆಗಳು ಮುಂದೆ ಬಂದಲ್ಲಿ ಈ ಕಾರ್ಯ ಸಾಧ್ಯವಿದೆ ಎಂದರು.

ಈ ಸಂದರ್ಭ ಕಪ್ಪಾಡಿ ಶಾಲೆಯ ಅಭಿವ್ರದ್ಧಿಗೆ ಸಹಕರಿಸಿದ ಚಂದ್ರಶೇಖರ್ ಶೆಟ್ಟಿ, ಗಣೇಶ್ ಶೆಟ್ಟಿ, ದೀಪಕ್ ಶೆಟ್ಟಿ ಚುಚ್ಚಿ, ಹೆರಿಯ ಮಡಿವಾಳ, ಸೀತಾರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಶಾಲಾಮುಖ್ಯಶಿಕ್ಷಕ ಸಂಜೀವ ಗೌಡ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಒ.ಆರ್. ಪ್ರಕಾಶ್, ಕಾಲ್ತೋಡು ಗ್ರಾಮಪಂಚಾಯತ್ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ, ಸದಸ್ಯರಾದ ಚಂದ್ರಶೇಖರ್ ಶೆಟ್ಟಿ, ಲಲಿತಾ ಶೆಟ್ಟಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಗುತ್ತಿಗೆದಾರ ಗಣೇಶ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಗೋಪಾಲ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸವೀನಾ ಶೆಟ್ಟಿ, ಶಿಕ್ಷಣ ಸಂಯೋಜಕ ವೆಂಕಪ್ಪ ಉಪ್ಪಾರು, ಕಪ್ಪಾಡಿ ಶ್ರೀ ನಂದಿಕೇಶ್ವರ ದೇವಸ್ಥಾನದ ಮೊಕ್ತೇಸರ ಸೀತಾರಾಮ ಶೆಟ್ಟಿ ಮೊದಲಾದವರು ಇದ್ದರು.

Comments are closed.