ಕರಾವಳಿ

ಮನಪಾ ನೂತನ ಮೇಯರ್ ಭಾಸ್ಕರ್ ಮೊಯ್ಲಿ : ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್

Pinterest LinkedIn Tumblr

ಮಂಗಳೂರು, ಮಾರ್ಚ್.8: ಮಂಗಳೂರು ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಕೊನೆಯ ಅವಧಿಯ ನೂತನ ಮೇಯರ್ ಆಗಿ ಕಾಂಗ್ರೆಸ್‌ನ ಹಿರಿಯ ಕಾರ್ಪೊರೇಟರ್ ಭಾಸ್ಕರ್ ಕೆ.ಮೊಯ್ಲಿ ಹಾಗೂ ಉಪಮೇಯರ್ ಆಗಿ ಕಾಂಗ್ರೆಸ್‌ನ ಮುಹಮ್ಮದ್ ಕುಂಜತ್ತಬೈಲ್ ಅಯ್ಕೆಯಾಗಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ 20ನೇ ಅವಧಿಯ ಮೇಯರ್, ಉಪಮೇಯರ್ ಆಯ್ಕೆಗೆ ಗುರುವಾರ ಬೆಳಿಗ್ಗೆ ಮಂಗಳೂರು ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೈಸೂರು ವಿಭಾಗದ ಪ್ರಾದೇಶಿ ಆಯುಕ್ತ ಶಿವಯೋಗಿ ಸಿ. ಕಳಸ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಚುನಾವಣೆ ಪ್ರಕ್ರಿಯೆ ಮಧ್ಯಾಹ್ನದವರೆಗೂ ನಡೆಯಿತು.

ಅಪರ ಜಿಲ್ಲಾಧಿಕಾರಿ ಕುಮಾರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತಿಯಲ್ಲಿ ಕಾರ್ಪೊರೇಟರ್ಗಳು ಸಹಿಯೊಂದಿಗೆ ಚುನಾವಣಾ ಪ್ರಕ್ರಿಯೆ ನಡೆಯಿತು.

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಭಾಸ್ಕರ ಕೆ. ಮೊಯ್ಲಿ ಹಾಗೂ ಬಿಜೆಪಿಯಿಂದ ಸುರೇಂದ್ರ ಅವರು ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಿಂದ ಮುಹಮ್ಮದ್ ಕುಂಜತ್ತಬೈಲ್ ಹಾಗೂ ಬಿಜೆಪಿಯಿಂದ ಮೀರಾ ಕರ್ಕೇರ ನಾಮಪತ್ರ ಸಲ್ಲಿಸಿದ್ದರು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2 ಹಾಗೂ ಸಿಪಿಎಂ, ಎಸ್ಡಿಪಿಐ ಹಾಗೂ ಪಕ್ಷೇತರ ತಲಾ 1 ಸ್ಥಾನಗಳನ್ನು ಹೊಂದಿವೆ. ವಿಧಾನ ಪರಿಷತ್ ಸದಸ್ಯ, ಶಾಸಕರು ಸೇರಿದಂತೆ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹತೆ ಹೊಂದಿರುವ 65 ಮಂದಿಯಲ್ಲಿ 61 ಮಂದಿ ಉಪಸ್ಥಿತರಿದ್ದರು. ಪ್ರತಿಸ್ಪರ್ಧಿ ಬಿಜೆಪಿಯ ಸುರೇಂದ್ರ ವಿರುದ್ಧ 18 ಮತಗಳ ಅಂತರದಿಂದ ಕುಲಶೇಖರ ವಾರ್ಡಿನ ಭಾಸ್ಕರ ಮೊಯ್ಲಿ ಮೇಯರ್ ಆಗಿ ಆಯ್ಕೆಯಾದರು. ಭಾಸ್ಕರ ಕೆ. ಪರವಾಗಿ 37 ಮತಗಳು ಚಲಾವಣೆಯಾಗಿದ್ದರೆ, ಸುರೇಂದ್ರ ಪರವಾಗಿ 19 ಮತಗಳು ಚಲಾವಣೆಯಾದವು.

ಉಪ ಮೇಯರ್ ಆಗಿ ಮುಹಮ್ಮದ್ ಕುಂಜತ್ತಬೈಲ್ ಕೂಡಾ 18 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಮುಹಮ್ಮದ್ ಪರವಾಗಿ 37 ಮತಗಳು ಹಾಗೂ ಮೀರಾ ಕರ್ಕೇರ ಪರವಾಗಿ 19 ಮತಗಳು ಚಲಾವಣೆಯಾದವು.

ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ಮೊಯ್ದಿನ್ ಬಾವಾ, ಗಣೇಶ್ ಕಾರ್ಣಿಕ್, ಬಿಜೆಪಿ ಸದಸ್ಯ ಹರೀಶ್ ಶೆಟ್ಟಿ ಗೈರು ಹಾಜರಾಗಿದ್ದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಾಸಕ ಜೆ.ಆರ್.ಲೋಬೋ ಚುನಾವಣೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದರು.

ಇದೇ ಸಂದರ್ಭ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರ ಆಯ್ಕೆ ನಡೆಯಿತು.

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿರುವ ಕವಿತಾ ಸನಿಲ್ ಹಾಗೂ ಉಪ ಮೇಯರ್ ರಜನೀಶ್ ಅವರ ಅಧಿಕಾರಾವಧಿ ಇಂದು ಕೊನೆಗೊಂಡಿತ್ತು.

ಅಭ್ಯರ್ಥಿ ಆಯ್ಕೆಗೆ ಬಾರೀ ಲಾಬಿ :

ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷದೊಳಗೆ ಕಳೆದ ಕೆಲ ದಿನಗಳಿಂದ ಬಾರೀ ಲಾಬಿ ನಡೆಯುತ್ತಿತ್ತು. ಈ ಸಂಬಂಧ ಬುಧವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಶಾಸಕರು ಹಾಗೂ ಮನಪಾ ಸದಸ್ಯರ ಸಭೆ ನಡೆದಿತ್ತು.

ಸಭೆಯಲ್ಲಿ ಅಭ್ಯರ್ಥಿ ಆಯ್ಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಹೈಕಮಾಂಡ್ ತೀರ್ಮಾನಕ್ಕೆ ಬಿಡಲಾಗಿದೆ. ಅದರಂತೆ ಬುಧವಾರ ರಾತ್ರಿ ಮತ್ತೆ ಸಭೆ ನಡೆದಿದ್ದರೂ ಒಮ್ಮತದ ಅಭ್ಯರ್ಥಿಯನ್ನು ಘೋಷಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಸಚಿವ, ಶಾಸಕರು ಮತ್ತೆ ಸಭೆ ಸೇರಿ ಮೇಯರ್ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದರು

 

Comments are closed.