ಕರಾವಳಿ

ಮಂಗಳೂರು ಸರಣಿ ಶೂಟೌಟ್ ಪ್ರಕರಣ : ಸಿಸಿಬಿ ಪೊಲೀಸರಿಂದ ಮತ್ತೋರ್ವ ಆರೋಪಿಯ ಬಂಧನ

Pinterest LinkedIn Tumblr

ಮಂಗಳೂರು, ಮಾರ್ಚ್. 3: ನಗರದಲ್ಲಿ ನಡೆದ ಸರಣಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಭೂಗತ ಪಾತಕಿ ಕಲಿ ಯೋಗೀಶನ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರು ನಗರದಲ್ಲಿ ಭೂಗತ ಪಾತಕಿ ಕಲಿ ಯೋಗೀಶ ಎಂಬಾತನು ತನ್ನ ಸಹಚರರಿಂದ ನಡೆಸಿದ ಸರಣಿ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕ ಶಾಂತರಾಮ್ ಅವರ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿಯನ್ನು ಕಲಿ ಯೋಗೀಶನ ಸಹಚರ ಹಳೆಯಂಗಡಿ ಕೊಯ್ಕುಡೆ ಗ್ರಾಮದ ದಿನೇಶ್ (35) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯ ವಶದಿಂದ 2 ಮೊಬೈಲ್ ಫೋನ್ ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿಯು ಕಲಿ ಯೋಗೀಶನ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಮಾಹಿತಿಯನ್ನು ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಕಲಿ ಯೋಗೀಶನೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳ ಮಾಹಿತಿಯನ್ನು ಕಲೆ ಹಾಕಿದ ಸಿಸಿಬಿ ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದರು.

ನಗರದಲ್ಲಿ ನಡೆದ ಸರಣಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರು ಭೂಗತ ಪಾತಕಿ ಕಲಿ ಯೋಗೀಶನ ಸಹಚರರಾದ ಮನೋಜ್ ಕುಮಾರ್, ಚಂದ್ರಶೇಖರ ಎಂಬವರನ್ನು ಕಳೆದ ಡಿ. 28ರಂದು ವಶಕ್ಕೆ ಪಡೆದುಕೊಂಡು 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳನ್ನು ಸ್ವಾಧೀನಪಡಿಸಿಕೊಂಡಿದ್ದರು.

ಅಲ್ಲದೇ ನಗರದ ಉದ್ಯಮಿಗಳ ಮಾಹಿತಿಯನ್ನು ಕಲಿ ಯೋಗೀಶನಿಗೆ ಒದಗಿಸುತ್ತಿದ್ದ ತೇಜ್ಪಾಲ್ ಎಂಬಾತನನ್ನು ಫೆ. 14ರಂದು ಪೊಲೀಸರು ದಸ್ತಗಿರಿ ಮಾಡಿದ್ದರು.

Comments are closed.