ಕರಾವಳಿ

ಕರಾವಳಿ ಕಾಂಗ್ರೆಸ್ ಪಾಳಯದಲ್ಲಿ ಭಿನ್ನಮತ ಸ್ಪೋಟ : ಸಚಿವರ ಸಮ್ಮುಖದಲ್ಲೇ ಶಾಸಕರಿಬ್ಬರ ಕಚ್ಚಾಟ

Pinterest LinkedIn Tumblr

ಮಂಗಳೂರು, ಮಾರ್ಚ್.02 : ರಾಜ್ಯದ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಅವರ ಸಮ್ಮುಖದಲ್ಲೇ ಕರಾವಳಿಯ ಶಾಸಕರಿಬ್ಬರ ನಡುವೆ ಕೈ ಕೈ ಮಿಲಾಯಿಸುವ ಹಂತದ ಘಟನೆ ಗುರುವಾರ ಮಂಗಳೂರಿನಲ್ಲಿ ನಡೆದಿದ್ದು,ಈ ಮೂಲಕ ಕರಾವಳಿ ಕಾಂಗ್ರೆಸ್ ಪಾಳಯದಲ್ಲಿದ್ದ ಭಿನ್ನಮತ ಸ್ಪೋಟಗೊಂಡಿದೆ.

ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ( ಸುರತ್ಕಲ್ ಕ್ಷೇತ್ರ) ಶಾಸಕ ಮೊಯ್ದೀನ್ ಬಾವಾ ಹಾಗೂ ಮುಲ್ಕಿ-ಮೂಡಬಿದ್ರೆ ಶಾಸಕ ಅಭಯ ಚಂದ್ರ ಜೈನ್ ಅವರು ಬಹಿರಂಗವಾಗಿ ಕಚ್ಚಾಡಿಕೊಂಡು ಬೈದಾಡಿಕೊಂಡಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಘಟನೆ ವಿವರ :

ಮಂಗಳೂರಿನ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಗುರುವಾರ ನೂತನವಾಗಿ ನಿರ್ಮಾಣಗೊಂಡ ಸ್ವಾಮಿ ವಿವೇಕಾನಂದ 3ಡಿತಾರಾಲಯದ ಉದ್ಘಾಟನಾ ಕಾರ್ಯಕ್ರಮ ನಿಗದಿಯಾಗಿತ್ತು. ರಾಜ್ಯದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಮ್ ಅವರು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿರುವ ಏಷ್ಯಾದ ಮೊದಲ ತಾರಾಲಯವನ್ನು ಉದ್ಘಾಟಿಸಲು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಸ್ಥಳಕ್ಕೆ ಬಂದಿದ್ದರು.

ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಆಗಮನ ವಿಳಂಬವಾದ ಹಿನ್ನೆಲೆಯಲ್ಲಿ ಸಚಿವ ಸೀತಾರಾಂ, ಶಾಸಕರು ಹಾಗೂ ಇತರ ಗಣ್ಯರು ಕುಶಲೋಪಹಾರಿ ಮಾತುಕತೆಯಲ್ಲಿದ್ದರು. ಈ ಸಂದರ್ಭ, ಕವಿತಾ ಸನಿಲ್ ಅವರ ಮೇಯರ್ ಅವಧಿ ಕೆಲ ದಿನಗಳಲ್ಲಿಯೇ ಕೊನೆಗೊಳ್ಳಲಿದೆ ಎಂದು ಶಾಸಕ ಮೊಯ್ದಿನ್ ಬಾವ ಅವರು ಸಚಿವರಿಗೆ ಮೇಯರ್ ಅವರನ್ನು ಪರಿಚಯಿಸಿದರು. ಅವಧಿ ಮುಗಿದರೇನಾಯಿತು. ಮುಂದೆ ಅವರಿಗೆ ಉತ್ತಮ ಸ್ಥಾನ ಸಿಗಬೇಕು ಎಂದು ಹೇಳಿದರು.

ಈ ವೇಳೆ ಮೊಯ್ದಿನ್ ಬಾವ ಅವರು,ಹೌದ್ ಸರ್, ಅವರು ಮುಂಬರುವ ಚುನಾವಣೆಯಲ್ಲಿ ಸುರತ್ಕಲ್ ಹಾಗೂ ಮೂಡುಬಿದಿರೆಯಿಂದ ಶಾಸಕ ಸ್ಥಾನದ ಆಕಾಂಕ್ಷಿ ಎಂದು ಹೇಳಿದರು. ಇದರಿಂದ ಕೆರಳಿದ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಅವರು ಮೊಯ್ದಿನ್ ಬಾವ ಜತೆ ವಾಗ್ವಾದಕ್ಕಿಳಿದರು. ಸಚಿವ ಎಂ.ಆರ್. ಸೀತಾರಾಂ ಅವರ ಸಮ್ಮುಖದಲ್ಲೇ ಶಾಸಕರಾದ ಅಭಯಚಂದ್ರ ಜೈನ್ ಹಾಗೂ ಮೊಯ್ದಿನ್ ಬಾವ ಪರಸ್ಪರ ಮಾತಿನ ಚಕಮಕಿ ನಡೆಸಿ ಸಚಿವರನ್ನು ಮುಜಗರಕ್ಕೆ ತಳ್ಳಿದ ಪ್ರಸಂಗ ನಡೆಯಿತು.

ಶಾಸಕರು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಿದಾಗ ಒಂದು ಹಂತದಲ್ಲಿ ಶಾಸಕರಿಬ್ಬರ ನಡುವೆ ಕೈ ಕೈ ಮಿಲಾಯಿಸುವ ಹಂತ ತಲುಪಿದ್ದು, ವಾತಾವರಣ ಬಿಗುಗೊಂಡ ಹಿನ್ನೆಲೆಯಲ್ಲಿ ಸಚಿವರ ಆಪ್ತರ ಮಧ್ಯ ಪ್ರವೇಶದೊಂದಿಗೆ ಶಾಸಕರನ್ನು ಸಮಾಧಾನ ಪಡಿಸಬೇಕಾಯಿತು. ಬಳಿಕ ಸಚಿವ ಸೀತಾರಾಮ್ ಇಬ್ಬರನ್ನೂ ಸಮಾಧಾನ ಪಡಿಸಿದರು.

ಈ ವೇಳೆ ಚಿತ್ರೀಕರಣ ಮಾಡುತ್ತಿದ್ದ ಮಾಧ್ಯಮದವರನ್ನು ಸಚಿವರು ಇದೆಲ್ಲಾ ತಮಾಷೆಗಾಗಿಯಪ್ಪ ಶೂಟಿಂಗ್ ಮಾಡ್ಬೇಡಿ ಎಂದರು. ಬಳಿಕ ನಡೆದ ಕಾರ್ಯಕ್ರಮದಲ್ಲೂ ಶಾಸಕರಿಬ್ಬರ ಮುನಿಸು ಎದ್ದು ಕಾಣುತ್ತಿತ್ತು.

Comments are closed.