ಪುತ್ತೂರು, ಫೆಬ್ರವರಿ 28: ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿವಾದಕ್ಕೆ ಗುರಿಯಾಗಿದ್ದ ‘ಮಡೆಸ್ನಾನ’ ಪ್ರಕರಣಕ್ಕೆ ಸಂಬಂಧಿಸಿದ ದಾವೆವೊಂದನ್ನು ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿದೆ.
ಭಕ್ತರೊಬ್ಬರು ವೈಯಕ್ತಿಕ ನೆಲೆಯಲ್ಲಿ ಹೂಡಿದ್ದ ದಾವೆಯನ್ನು ಸುಪ್ರೀಂ ಕೋರ್ಟ್ ದಾಖಲಿಸಿಕೊಂಡಿದೆ. ಬಂಟ್ವಾಳ ತಾಲ್ಲೂಕಿನ ಮಾಣಿಯ ಪಾರ್ಪಜೆ ವೆಂಕಟ್ರಮಣ ಭಟ್ಟ ಮಕರಂದ ಎಂಬವರು ಭಕ್ತರ ನೆಲೆಯಲ್ಲಿ ದಾವೆ ಹೂಡಿ, ತಮ್ಮ ಮೂಲಭೂತ ಹಕ್ಕನ್ನು ಉಳಿಸಿ ಕೊಡುವಂತೆ ಕೇಳಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ನ 7 ನ್ಯಾಯಾಧೀಶರಿರುವ ಪುಲ್ ಬೆಂಚ್ ಈ ಪ್ರಕರಣದ ವಿಚಾರಣೆ ನಡೆಸಲು ದಾವೆಯನ್ನು ಅಂಗೀಕರಿಸಿದೆ ಎಂದು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿರುವ ವೆಂಕಟ್ರಮಣ ಭಟ್ ಅವರು ತಿಳಿಸಿದ್ದಾರೆ.
ಕುಕ್ಕೇ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದ್ದ ‘ಮಡೆಸ್ನಾನ’ಕ್ಕೆ ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಮಡೆಸ್ನಾನ ವಿವಾದಕ್ಕೆ ಗುರಿಯಾಗುತ್ತಿದ್ದಂತೆಯೇ ನ್ಯಾಯಾಲಯದ ಮೆಟ್ಟಿಲು ಏರಲಾಗಿತ್ತು.
ಹಿಂದಿನ ವರ್ಷ ಮಡೆಸ್ನಾನದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಮಡೆಸ್ನಾನ ನಡೆಯಲು ಅವಕಾಶ ಇರಲಿಲ್ಲ. ಮಡೆಸ್ನಾನಕ್ಕೆ ಅವಕಾಶವಿಲ್ಲದಾದ ಹಿನ್ನಲೆಯಲ್ಲಿ ದೇವಾಲಯದ ಒಬ್ಬ ಭಕ್ತನಾಗಿ ಪಾರ್ಪಜೆ ವೆಂಕಟ್ರಮಣ ಭಟ್ ಅವರು ವೈಯಕ್ತಿಕ ನೆಲೆಯಲ್ಲಿ ಸುಪ್ರೀಂ ಕೋರ್ಟ್ನ ಮೆಟ್ಟಲೇರಿದ್ದರು. ಚಂಪಾಷಷ್ಠಿ ವೇಳೆ ಮಡೆಸ್ನಾನಕ್ಕೆ ಅವಕಾಶ ನೀಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದರು. ಇದೀಗ ಸುಪ್ರಿಂ ಕೋರ್ಟು ಅವರ ದಾವೆಯನ್ನು ದಾಖಲಿಸಿಕೊಂಡಿದೆ.
ಮಡೆಸ್ನಾನ ತನ್ನ ಧಾರ್ಮಿಕ ನಂಬಿಕೆ. ಮಡೆಸ್ನಾನದಿಂದಾಗಿ ಯಾರಿಗೂ ತೊಂದರೆ ಆಗಿಲ್ಲ. ಸಮಸ್ಯೆ ಆಗಿದೆ ಎಂದು ವೈದ್ಯರು ಪ್ರಮಾಣ ಪತ್ರ ನೀಡಿರುವ ಉದಾಹರಣೆಗಳಿಲ್ಲ, ಇದು ಅಮಾನುಷ ಆಚರಣೆಯಂತೂ ಅಲ್ಲವೇ ಅಲ್ಲ. ಭಕ್ತರು ಸ್ವಯಂ ನೆಲೆಯಲ್ಲಿ ಮಡೆಸ್ನಾನ ಆಚರಿಸುತ್ತಾರೆ. ಆದ್ದರಿಂದ ಮಡೆಸ್ನಾನಕ್ಕೆ ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿರುವ ವೆಂಕಟ್ರಮಣ ಭಟ್ ಅವರು ತಿಳಿಸಿದ್ದಾರೆ.