ಕರಾವಳಿ

ಮಣಿಪಾಲದಲ್ಲಿ ಇಂದಿರಾ ಕ್ಯಾಂಟಿನ್ ಆರಂಭ; ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಉದ್ಘಾಟನೆ

Pinterest LinkedIn Tumblr

ಉಡುಪಿ: ರಾಜ್ಯ ಸರ್ಕಾರ ಬಡವರು ಹಾಗೂ ಮಧ್ಯಮವರ್ಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದೆ. ಇದರಿಂದ ದೊಡ್ಡ ಹೋಟೇಲ್‌ಗಳಲ್ಲಿ ಹೆಚ್ಚು ಹಣ ಕೊಟ್ಟು ಆಹಾರ ಪಡೆದುಕೊಳ್ಳಲು ಅಸಾಧ್ಯವಾಗುವವರಿಗೆ ಕಡಿಮೆ ದರದಲ್ಲಿ ಚಾ-ತಿಂಡಿ, ಊಟ ಲಭ್ಯವಾಗಲಿದೆ ಎಂದು ಎಂದು ಮೀನುಗಾರಿಕೆ, ಯುಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಮಂಗಳವಾರ ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಉದ್ಘಾಟನೆಯನ್ನು ನೆರವೇರಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಹಸಿದವರಿಗೆ ಆಹಾರ ಲಭ್ಯವಾಗಿಸಲು ಇಂದಿರಾ ಕ್ಯಾಂಟೀನ್ ಮೂಲಕ ಕಡಿಮೆ ದರದಲ್ಲಿ ಊಟ ತಿಂಡಿಗಳನ್ನು ಪಡೆದುಕೊಳ್ಳಬಹುದು. ವಿಶೇಷವಾಗಿ ವಿವಿಧ ಜಿಲ್ಲೆಗಳಿಂದ ಹಲವಾರು ರೋಗಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವುದರಿಂದ ರೋಗಿಗಳ ಸಂಬಂಧಿಕರಿಗೆ, ಮನೆಯವರಿಗೆ ಹಾಗೂ ಆಟೋ ಚಾಲಕರಿಗೆ, ಕೂಲಿ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ ಒಟ್ಟು ತೀರಾ ಬಡವರಿಗೆ ದೊಡ್ಡ ದೊಡ್ಡ ಹೋಟೇಲ್‌ನಲ್ಲಿ ಹಣ ಕೊಟ್ಟು ಆಹಾರ ಪಡೆಯಲು ಅಸಾಧ್ಯವಾಗುವವರಿಗೆ ಇಂದಿರಾ ಕ್ಯಾಂಟೀನ್ ಸಹಾಯವಾಗುತ್ತದೆ ಎಂದರು.
ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಒಟ್ಟು ಎರಡು ಇಂದಿರಾ ಕ್ಯಾಂಟೀನ್ ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಮಣಿಪಾಲದಲ್ಲಿ 92 ಲಕ್ಷ ಮತ್ತು ಉಡುಪಿಯಲ್ಲಿ 92 ಲಕ್ಷ ವೆಚ್ಚದಲ್ಲಿ ಕ್ಯಾಂಟಿನ್ ನಿರ್ಮಿಸಲಾಗಿದ್ದು ಉಡುಪಿಯ ಕ್ಯಾಂಟಿನ್ ಒಂದು ವಾರದಲ್ಲಿ ಕೆಲಸ ಕಾಮಗಾರಿ ಪೂರ್ಣಗೊಂಡು ಜನರಿಗೆ ಸೇವೆ ನೀಡಲಿದೆ ಎಂದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗಿನ ಚಾ-ತಿಂಡಿ 5 ರೂಗಳಲ್ಲಿ ಹಾಗೂ ರಾತ್ರಿ ಮತ್ತು ಮಧ್ಯಾಹ್ನದ ಊಟ 10 ರೂಗಳಲ್ಲಿ ಲಭ್ಯವಾಗಲಿದೆ. ಕ್ಯಾಂಟೀನ್‌ನಲ್ಲಿ ದೊರೆಯುವ ಆಹಾರದ ಮೆನುಗಳ ಬಗ್ಗೆ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದ್ದು, ಪ್ರತೀ ತಿಂಗಳಿಗೊಮ್ಮೆ ಜನರ ಬೇಡಿಕೆಗಳಿಗನುಗುಣವಾಗಿ ಮೆನುವನ್ನು ಬದಲಾಯಿಸುವ ಜವಾಬ್ದಾರಿಯನ್ನು ಈ ಸಮಿತಿ ಹೊಂದಿದೆ ಎಂದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗಿನ ಉಪಹಾರ ದಲ್ಲಿ ಪ್ರತೀ ದಿನ ಇಡ್ಲಿ, ಅದರೊಂದಿಗೆ ಸೋಮವಾರ ಪುಳಿಯೊಗರೆ, ಮಂಗಳವಾರ ಖಾರಬಾತ್, ಬುಧವಾರ ಪೊಂಗಲ್, ಗುರುವಾರ ರವಾ ಕಿಚಡಿ, ಶುಕ್ರವಾರ ಚಿತ್ರಾನ್ನ, ಶನಿವಾರ ವಾಂಗಿಬಾತ್ ಹಾಗೂ ಭಾನುವಾರ ಖಾರಬಾತ್ ಮತ್ತು ಕೇಸರಿಬಾತ್ ಲಭ್ಯವಿರುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ದಿನನಿತ್ಯ ಅನ್ನ, ತರಕಾರಿ ಸಾಂಬಾರ್ ಮತ್ತು ಮೊಸರನ್ನ ಹಾಗೂ ಅದರೊಂದಿಗೆ ಟೊಮೆಟೋಬಾತ್, ಚಿತ್ರಾನ್ನ, ವಾಂಗಿಬಾತ್, ಬಿಸಿಬೇಳೆಬಾತ್, ಮೆಂತ್ಯೆ ಪುಲಾವ್, ಪುಳಿಯೊಗರೆ, ಪುಲಾವ್ ಲಭ್ಯವಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷರಾದ ಸಂಧ್ಯಾ ತಿಲಕ್, ಪೌರಾಯುಕ್ತ ಡಿ.ಮಂಜುನಾಥಯ್ಯ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.

Comments are closed.