ಕರಾವಳಿ

ನಾಡಾ ಬಾಂಬ್ ಎಸೆದು ಭಟ್ಕಳ-ಹೊನ್ನಾವರ ಶಾಸಕ ಮಂಕಾಳ ವೈದ್ಯ ಕೊಲೆಗೆ ಯತ್ನ

Pinterest LinkedIn Tumblr

ಹೊನ್ನಾವರ: ಭಟ್ಕಳ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಮಂಕಾಳ ವೈದ್ಯರ ಹತ್ಯೆಗೆ ಯತ್ನ ನಡೆದಿದ್ದು, ನಾಡಬಾಂಬ್‌ ಎಸೆದು ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿಯ ಕೈಯಲ್ಲೇ ಸ್ಫೋಟಗೊಂಡಿದ್ದರಿಂದ ಆರೋಪಿಯ ಕೈ ಛಿದ್ರವಾಗಿದೆ. ತೀವ್ರ ಗಾಯಗೊಂಡ ಆರೋಪಿ ಖೈತಾನ್‌ ರೈಮಂಡ್‌ನ‌ನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

(ಶಾಸಕ ಮಾಂಕಾಳ ವೈದ್ಯ)

(ಗಾಯಗೊಂಡ ಆರೋಪಿ)

ಭಾನುವಾರ ತಡರಾತ್ರಿ ಶರಾವತಿ ದಂಡೆಯಲ್ಲಿನ ಹೊಸಾಡ ಗ್ರಾಮದ ರಂಗನಿಮೋಟಾ ಬಳಿ ಶರಾವತಿ ಯುವಕ ಸಂಘ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯ ಏರ್ಪಡಿಸಿತ್ತು. ರಾತ್ರಿ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಶಾಸಕ ಮಂಕಾಳ ವೈದ್ಯ ಅವರು ತಡವಾಗಿ ಬಂದಿದ್ದರಿಂದ ರಾತ್ರಿ 11:15ಕ್ಕೆ ಆರಂಭವಾಯಿತು. ಕಾರ್ಯಕ್ರಮ ನಡೆಯುತ್ತಿರುವಾಗಲೇ ವೇದಿಕೆಯ ಹಿಂಭಾಗದ ಬೇಲಿಯ ಆಚೆ ಭಾರೀ ಪ್ರಮಾಣದ ಸ್ಫೋಟದ ಸದ್ದು ಕೇಳಿ ಬಂದಿದೆ. ಶಬ್ದ ಕೇಳಿದಾಕ್ಷಣ ಸ್ಥಳದಲ್ಲಿದ್ದ ಎಸ್‌ಐ ಆನಂದಮೂರ್ತಿ ದೌಡಾಯಿಸಿದ್ದಾರೆ. ನಾಡಬಾಂಬ್‌ ಕೈಯಲ್ಲೇ ಸ್ಫೋಟಗೊಂಡಿದ್ದರಿಂದ ಬಲಗೈ ಛಿದ್ರವಾಗಿ ನರಳುತ್ತಿದ್ದ ಖೈತಾನ್‌ ರೈಮಂಡ್‌ (24) ಪೊಲೀಸರನ್ನು ನೋಡುತ್ತಿದ್ದಂತೆ ಬಾವಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ, ಪೊಲೀಸರು ಆತನನ್ನು ಬಂಧಿಸಿ ತೀವ್ರ ರಕ್ತಸ್ರಾವವಾಗುತ್ತಿದ್ದರಿಂದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಹೊನ್ನಾವರ ಮೂಲದ ಆರೋಪಿ ಖೈತಾನ್‌ಗೆ ಘಟನೆ ನಡೆದ ಹೊಸಾಡ ಗ್ರಾಮದಲ್ಲಿ ಬಂಧುಗಳಿದ್ದಾರೆ. ಸಭೆ ನಡೆಯುವ ಸ್ಥಳದ ಹಿಂದೆ ಆತ ಏಕೆ ಬಂದ, ಎಲ್ಲಿ ಸ್ಫೋಟ ಮಾಡಬಯಸಿದ್ದ, ಆತ ಓಡಾಡಿದ ಬೈಕ್‌ನ ಗುರುತು, ಘಟನೆಯ ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಯ ಬಳಿ ಓಡಿದ್ದು ಏಕೆ, ಬಳಸಿದ ಸ್ಫೋಟಕ ಯಾವುದು, ಆತನ ಉದ್ದೇಶ ಏನು, ಬಲಗೈಯಿಂದ ಸ್ಫೋಟಕ ಎಸೆಯುವ ಮೊದಲೇ ಸ್ಫೋಟಿಸಿತೆ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ. ಕುರಿತು ತನಿಖೆ ನಡೆಸಲು ತಜ್ಞರು ಮಂಗಳೂರಿನಿಂದ ಆಗಮಿಸಿದ್ದಾರೆ.

Comments are closed.