ಕರಾವಳಿ

ಎ.ಡಿ.ಬಿ ಒಂದನೇ ಹಂತದ ಯೋಜನೆಗೆ ಭೃಷ್ಟಾಚಾರದ ಕಳಂಕವಿರುವಾಗ ಎರಡನೇ ಹಂತದ ಯೋಜನೆಗೆ ತರಾತುರಿ ಯಾಕೆ : ಸುಧೀರ್ ಶೆಟ್ಟಿ ಕಣ್ಣೂರು

Pinterest LinkedIn Tumblr

ಮಂಗಳೂರು : ಎ.ಡಿ.ಬಿ ಒಂದನೇ ಹಂತದ ಯೋಜನೆಯ ಅಸಮರ್ಪಕ ಕಾಮಗಾರಿ ಮತ್ತು ನಿರ್ವಹಣೆಯಿಂದ ಭೃಷ್ಟಾಚಾರದ ತೂಗುಗತ್ತಿ ಪಾಲಿಕೆ ಆಡಳಿತದವರ ಮೇಲೆ ತೂಗುತ್ತಿರುವಾಗಲೇ ಇದೀಗ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಅವಸರವಸರವಾಗಿ, ಪಾಲಿಕೆ ಸದಸ್ಯರಿಗೆ ಸಂಪೂರ್ಣ ಮಾಹಿತಿ ಒದಗಿಸದೆ ಆಗಿರುವ ಭೃಷ್ಟಾಚಾರ ಹಾಗೂ ಲೋಪದೋಷಗಳನ್ನು ಮುಚ್ಚಿ ಹಾಕಲು ಪಾಲಿಕೆಯು ಎಡಿಬಿ ಎರಡನೇ ಹಂತದ ಯೋಜನೆಗೆ ತವಕಪಡುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಮನಪಾ ವಿಪಕ್ಷ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ಆರೋಪಿಸಿದ್ದಾರೆ.

ನಗರದಲ್ಲಿಂದು ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾದ ಪ್ರಥಮ ಹಂತದ ಎಡಿಬಿ ಯೋಜನೆಗಾಗಿ ವೆಚ್ಚ ಮಾಡಲಾದ ಸಾಲದ ಹಣ ಹಾಗೂ ಬಡ್ಡಿ ಸೇರಿ 502,66,41,978 ರೂ. ಒಟ್ಟು ಬಾಕಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಎಡಿಬಿ ಸಾಲ ಪಡೆದು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿರುವ ದ್ವಿತೀಯ ಹಂತದ ಯೋಜನೆಯ ಲೋಪದೋಷಗಳನ್ನು ನಿವಾರಿಸಿ ಮುಂದುವರಿಯಬೇಕು ಎಂದು ಒತ್ತಾಯಿಸಿದರು.

ಮಹಾನಗರಪಾಲಿಕೆಯ ಪರಿಷತ್ತು ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ತೀವ್ರ ವಿರೋಧದ ನಡುವೆಯೂ ಆಡಳಿತದವರು ಎಡಿಬಿ ನರೆವಿನ ಒಳಚರಂಡಿ ಯೋಜನೆಗೆ 195 ಕೋಟಿ ರೂ. ಕೋಟಿ ಹಾಗೂ ನೀರಿನ ಸಂಪರ್ಕದ ವಿಸ್ತರಣೆಗೆ ರೂ 218 ಕೋಟಿ ರೂ., ಅಮೃತ್‌ ಯೋಜನೆಯ ರೂ. 33.25 ಕೋಟಿ ಹಾಗೂ ಸ್ಮಾರ್ಟ್ ಸಿಟಿಯಲ್ಲಿ ರೂ 40 ಕೋಟಿ ಕಾಮಗಾರಿಗೆ ಅನುಮೋದನೆ ಪಡೆದಿರುತ್ತಾರೆ.

ಎಡಿಬಿ ಪ್ರಥಮ ಹಂತದ ಯೋಜನೆಯಡಿ ಕುಡಿಯುವ ನೀರು ಯೋಜನೆಗೆ 106.319 ಕೋಟಿ ರೂ. ಖರ್ಚು ಮಾಡಿ 2026ರ ಜನಸಂಖ್ಯೆ ಆಧಾರದಲ್ಲಿ ವಾರವಿಡೀ ದಿನದ 24 ಗಂಟೆಯೂ ನೀರು ಕೊಡುವ ಭರವಸೆಯೊಂದಿಗೆ ಯೋಜನೆ 2013ಕ್ಕೆ ಪೂರ್ಣಗೊಂಡಿದೆ. ಆದರೆ 2018ರ ಜನಸಂಖ್ಯೆ ಆಧಾರದಲ್ಲಿಯೇ ಈ ವ್ಯವಸ್ಥೆಯಡಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಮತ್ತೆ 2046ರ ಜನಸಂಖ್ಯೆ ಆಧಾರದಲ್ಲಿ 291.25 ಕೋಟಿ ರೂ. ಹಣವನ್ನು ವೆಚ್ಚ ಮಾಡುವುದು ಅವೈಜ್ಞಾನಿಕ ಎಂದು ಅವರು ಆಕ್ಷೇಪಿಸಿದರು.

ಎಡಿಬಿ ನೆರವಿನ ಸಾಲ ಯೋಜನೆ ಅತ್ಯಂತ ದುಬಾರಿಯಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಸಾಲ ಪಾವತಿಸಬೇಕಾಗಿದೆ. ಪ್ರಥಮ ಹಂತದ ಯೋಜನೆಗಾಗಿ ಸಾಲದ ಅಸಲು 176,41, 37,401 ರೂ., ಬಡ್ಡಿ 326,25,04,577 ಸೇರಿ ಒಟ್ಟು ಬಾಕಿ ಹಣದಲ್ಲಿ ಈವರೆಗೂ ಒಂದು ರೂಪಾಯಿಯನ್ನೂ ಪಾವತಿಸಲಾಗಿಲ್ಲ. ಹೀಗಿರುವಾಗ ಮತ್ತೆ ದ್ವಿತೀಯ ಹಂತದ ಯೋಜನೆಗೆ ಸಾಲದ ಹಣದಲ್ಲಿ ನಡೆದರೆ ಆ ಹೊರೆಯನ್ನು ಸಾರ್ವಜನಿಕರು ಹೊರಬೇಕಾಗುತ್ತದೆ ಎಂದು ಅವರು ಹೇಳಿದರು.

ಪ್ರಥಮ ಹಂತದ ಎಡಿಬಿಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಿರುವ ಸಚಿವ ರೋಶನ್ ಬೇಗ್ ಅವರು ಸಿಒಡಿ ತನಿಖೆಗೆ ಆದೇಶಿಸಿದ್ದಾರೆ. ಆದ್ದರಿಂದ ಎರಡನೆ ಹಂತದ ಎಡಿಬಿ ಯೋಜನೆ ಅನುಷ್ಠಾನಗೊಳಿಸುವ ಮೊದಲು ಸಚಿವರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಗತ್ಯ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಬೇಕು. ಭ್ರಷ್ಟಾಚಾರ ಆಗದಂತೆ ಎಚ್ಚರಿಕೆ ವಹಿಸಬೇಕು ಸುಧೀರ್ ಶೆಟ್ಟಿ ಕಣ್ಣೂರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮೇಯರ್ ರಾಜೇಂದ್ರ ಕುಮಾರ್, ಮನಪಾ ಸದಸ್ಯರಾದ ರೂಪಾ.ಡಿ.ಬಂಗೇರಾ, ಪ್ರೇಮನಾಥ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Comments are closed.