ಕರಾವಳಿ

ದೇವರ ಸಂಕಲ್ಪದಿಂದ ಕಾರ್‍ಯ ಸಿದ್ಧಿ: ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಅನಂತ ಕುಮಾರ್ ಹೆಗಡೆ

Pinterest LinkedIn Tumblr

ಕುಂದಾಪುರ: ಭಗವಂತನ ದಯೆ, ಇಚ್ಚೆಯಿಂದ ನಮಗೆ ದೇವತಾ ಕಾರ್‍ಯದಲ್ಲಿ ಪಾಲ್ಗೊಳ್ಳಲು ಸಾಧ್ಯ. ದೇವರ ಸಂಕಲ್ಪದಿಂದ ಮಾತ್ರ ಕಾರ್‍ಯ ಸಿದ್ಧಿ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರು.
ಅವರು ಮಂಗಳವಾರ ಬಾರಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ಧಾರ್ಮಿಕ ಸಭಾ ಕಾರ್‍ಯಕ್ರಮದಲ್ಲಿ ಮಾತನಾಡಿದರು.

ಭಗವಂತ ಎನ್ನುವುದು ಅದ್ಭುತವಾದ ಶಕ್ತಿ. ನೋಡುವ ದೃಷ್ಠಿಯಲ್ಲಿ ಭಗವಂತ ಇರುತ್ತಾನೆ. ಚೈತನ್ಯ ಶಕ್ತಿಯ ಆರಾಧನೆಯೇ ಹಿಂದುತ್ವ. ಇಡೀ ಭೂಮಂಡಲವು ಒಪ್ಪಿಕೊಂಡು ಬಂದಿರುವ ಶಕ್ತಿಯನ್ನು ನಾವು ಆರಾಧಿಸಿಕೊಂಡು ಬಂದಿದ್ದೇವೆ ಎಂದರು.

ನಾವೇ ಧನ್ಯರು:
ಕೋಟಿ ಕೋಟಿ ದೇವರನ್ನು ಪೂಜಿಸುವ ಹಿಂದುಗಳಿಗೆ ನಂಬಿಕೆ ಜಾಸ್ತಿ. ಕಲ್ಲು, ಮರ, ಮಣ್ಣಿನಲ್ಲಿರುವ ದೈವಿಕ ಶಕ್ತಿಯನ್ನು ಪೂಜಿಸುವ ನಮಗೆ ನಾವೇ ಸಾಟಿ. ಈ ಪರಂಪರೆಯಲ್ಲಿ ಹುಟ್ಟಿದ್ದಕ್ಕೆ ನಾವು ಧನ್ಯರು ಎಂದು ಹೆಗಡೆ ಹೇಳಿದರು.

ದೇವಸ್ಥಾನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಅವರು ಮಾತನಾಡಿ ಸಮಸ್ತರ ಸಹಕಾರ, ತಾಯಿಯ ಅನುಗ್ರಹದಿಂದ ಸಮಾಜದ ಅತೀ ದೊಡ್ಡ ದೇವಸ್ಥಾನ ನಿರ್ಮಿಸಲು ಸಾಧ್ಯವಾಗಿದೆ, ಇದು ಸಮಸ್ತರ ಒಗ್ಗಟ್ಟಿನ ಪ್ರತಿಫಲವಾಗಿದೆ ಎಂದರು.

ಅತಿಥಿಗಳಾಗಿ ರೂಪಾ ಅನಂತ ಕುಮಾರ್ ಹೆಗಡೆ, ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಬಿ. ಅಣ್ಣಯ್ಯ ಶೇರಿಗಾರ್, ಪ್ರಧಾನ ಕಾರ್‍ಯದರ್ಶಿ ನರಸಿಂಹ ಬಿ. ದೇವಾಡಿಗ, ಕೋಶಾಽಕಾರಿ ಬಿ. ಜನಾರ್ಧನ ದೇವಾಡಿಗ, ಮುಖ್ಯ ಸಂಚಾಲಕ ಹಿರಿಯಡ್ಕ ಮೋಹನ್‌ದಾಸ್, ವಿಶ್ವಸ್ಥರಾದ ಸುರೇಶ ಡಿ. ಪಡುಕೋಣೆ,  ನಾರಾಯಣ ಎಂ. ದೇವಾಡಿಗ, ದಿನೇಶ್ ಸಿ. ದೇವಾಡಿಗ, ಎನ್. ರಘುರಾಮ ದೇವಾಡಿಗ ಉಪಸ್ಥಿತರಿದ್ದರು.
ದೇವಸ್ಥಾನದ ನಿರ್ಮಾಣಕ್ಕೆ ಸ್ಥಳ ಖರೀದಿಸುವಲ್ಲಿ ಸಹಕರಿಸಿದ ದಾನಿಗಳನ್ನು ಸಮ್ಮಾನಿಸಲಾಯಿತು.

ವಿಶ್ವಸ್ಥ ಜನಾರ್ಧನ ಎಸ್. ದೇವಾಡಿಗ ಸ್ವಾಗತಿಸಿ, ನಾರಾಯಣ ಎಂ. ದೇವಾಡಿಗ ವಂದಿಸಿದರು. ರಮೇಶ್ ದೇವಾಡಿಗ ಮತ್ತು ರವಿ ದೇವಾಡಿಗ ನಿರೂಪಿಸಿದರು. ಯಾದವ್ ದೇವಾಡಿಗ ಪಾವಂಜೆ ಸಮ್ಮಾನಿತರನ್ನು ಪರಿಚಯಿಸಿದರು.

Comments are closed.