ಮಂಗಳೂರು, ಫೆಬ್ರವರಿ,20: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರವನ್ನು ಮಂಗಳವಾರ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದ್ದಾರೆ.
ಈ ವೇಳೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸಲ್ಲಿಸಿದ ಶಾ ಅವರು ಕುಕ್ಕೆ ಸುಬ್ರಹ್ಮಣ್ಯ ಶ್ರೀಗಳ ಜೊತೆ ಮಾತುಕತೆ ನಡೆಸಿದರು. ಕರಾವಳಿಯಲ್ಲಿ ಬಿಜೆಪಿ ಪರ ಪ್ರಚಾರವನ್ನು ಆರಂಭಿಸಲು ನಿನ್ನೆ ರಾತ್ರಿ ಅಮಿತ್ ಶಾ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಆದಿಶೇಷ ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರು.
ಅಮಿತ್ ಶಾಗೆ ಜ್ವರ : ವೈದ್ಯರಿಂದ ತಪಾಸಣೆ
ಮೂರು ದಿನಗಳ ರಾಜ್ಯದ ಕರಾವಳಿ ಭಾಗದಲ್ಲಿ ಪ್ರವಾಸ ಕೈಗೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಳೆದ ರಾತ್ರಿ ಆಗಮಿಸಿ ಅಲ್ಲಿನ ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಆದಿಶೇಷ ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ ಆರೋಗ್ಯದಲ್ಲಿ ಕಳೆದ ರಾತ್ರಿ ಏರುಪೇರಾಗಿತ್ತು. ಶಾ ಜ್ವರದಿಂದ ಬಳಲುತ್ತಿದ್ದು, ವೈದ್ಯರು ತಪಾಸಣೆ ಮಾಡಿದ್ದಾರೆ. ಇಂದಿನ ಕಾರ್ಯಕ್ರಮಗಳಲ್ಲಿ ಕುಳಿತು ಮಾತನಾಡುವಂತೆ ಶಾಗೆ ವೈದ್ಯರು ಸಲಹೆ ನೀಡಿದ್ದಾರೆ.
ಕಳೆದ ರಾತ್ರಿ ಅಮಿತ್ ಶಾಗೆ ಉತ್ತರ ಭಾರತ ಶೈಲಿಯ ಊಟ ತಯಾರಿಸಲಾಗಿತ್ತು. ಇಂದು ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಬಳಿಯಿರುವ ಕುಲ್ಕುಂದದಲ್ಲಿ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಂಡು ಬಳಿಕ ಕರಾವಳಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ಸಂಸದ ನಳೀನ್ ಕಟೀಲ್, ಸ್ಥಳೀಯ ಶಾಸಕ ಅಂಗಾರ ಸೇರಿದಂತೆ ಹಲವರು ಅಮಿತ್ ಶಾ ಅವರ ಜೊತೆಗಿದ್ದರು.