ಕರಾವಳಿ

ತಲಪಾಡಿ ಹಲ್ಲೆ ಪ್ರಕರಣ : ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ನಾಲ್ವರ ಬಂಧನ

Pinterest LinkedIn Tumblr

ಮಂಗಳೂರು, ಫೆಬ್ರವರಿ.20: ನಗರದ ಕಾಲೇಜೊಂದರ ಇಬ್ಬರು ವಿದ್ಯಾರ್ಥಿಗಳ ಮೇಲೆ ತಲಪಾಡಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಉಳ್ಳಾಲ ಠಾಣಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನಾರ್ಲ ಪಡೀಲಿನ ಜೀವನ್ ಡಿಸೋಜ (23), ಕುಂಜತ್ತೂರಿನ ಕುಚ್ಚಿಕಾಡ್ ನಿವಾಸಿ ನಿಕೇಶ್ (19),ಮಂಜೇಶ್ವರ ಕುಂಜತ್ತೂರಿನ ಶೋಭಿತ್ (20) ಹಾಗೂ ಮೈಕಲ್ ಯಾನೆ ಕಿಶೋರ್ (20) ಎಂದು ಗುರುತಿಸಲಾಗಿದೆ.

ಫೆ. 17ರಂದು ನಗರ ಸಾರಿಗೆ ಬಸ್‌‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಮಂಜೇಶ್ವರ ಕುಂಜತ್ತೂರಿನ ಇಬ್ಬರು ವಿದ್ಯಾರ್ಥಿಗಳ ಮೇಲೆ ತಲಪಾಡಿ ಬಳಿ ತಂಡವೊಂದು ಏಕಾಏಕಿ ಹಲ್ಲೆ ನಡೆಸಿತ್ತು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರ ಜೊತೆ ನಗರದ ಕಾಲೇಜಿನ ವಿದ್ಯಾರ್ಥಿಗಳಾದ ಅಹ್ಮದ್ ಇಮ್ರಾನ್ ಮತ್ತು ಫೈಝಲ್ ಎಂಬವರು ಸಲುಗೆಯಿಂದ ಮಾತನಾಡಿದ ಕಾರಣಕ್ಕಾಗಿ ಈ ಹಲ್ಲೆ ನಡೆದಿತ್ತು ಎಂದು ಹೇಳಲಾಗಿತ್ತು.

ಇದೀಗ ಹಲ್ಲೆ ನಡೆಸಿದ ಆರೋಪದಲ್ಲಿ ಈ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸ್ ಠಾಣಾ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ನೇತೃತ್ವದಲ್ಲಿ ಕೋಟೆಕಾರು ಬೀರಿ ಎಂಬಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣಾ ಎಸ್‌ಐ ವಿನಾಯಕ ತೋರಗಲ್, ಎಎಸ್‌ಐ ವಿಶ್ವನಾಥ ರೈ, ದಕ್ಷಿಣ ಉಪವಿಭಾಗ ರೌಡಿ ನಿಗ್ರದ ದಳ ಸಿಬ್ಬಂದಿಗಳಾದ ಮೋಹನ್, ಶರೀಫ್, ರಾಜಾರಾಮ, ಇಕ್ಬಾಲ್, ಚಿದಾನಂದ, ಸುರೇಶ ಮತ್ತು ವಾಸುದೇವ ಭಾಗವಹಿಸಿದ್ದರು.

Comments are closed.