ಕುಂದಾಪುರ: ತನ್ನೂರಿನ ಸಮೀಪ ಫೆ.14ರಂದು ನಡೆದ ಹಬ್ಬ ಹಾಗೂ ಯಕ್ಷಗಾನ ಕಾರ್ಯಕ್ರಮ ಮುಗಿಸಿ ಸ್ನೇಹಿತನನ್ನು ಮನೆಗೆ ಬಿಟ್ಟು ಮರಳುವಾಗ ಕುಂದಾಪುರದ ಕೋಣಿ ಎಂಬಲ್ಲಿ ಬೈಕ್ ಹಾಗೂ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಇಂಜಿಯರಿಂಗ್ ವಿದ್ಯಾರ್ಥಿಯೋರ್ವನ ಮಿದುಳು ನಿಷ್ಕ್ರಿಯಗೊಂಡ ಪರಿಣಾಮ ಆತನ ಅಂಗಾಂಗಗಳನ್ನು ದಾನ ಮಾಡಿದ ಘಟನೆ ಕುಂದಾಪುರ ತಾಲೂಕಿನ ಕೆದೂರು ಎಂಬಲ್ಲಿ ನಡೆದಿದೆ.
ತಾಲೂಕಿನ ಕೆದೂರು ನಿವಾಸಿ ನಿವೃತ್ತ ಪೋಸ್ಟ್ ಮಾಸ್ಟರ್ ಧರ್ಮರಾಜ್ ಎಂಬವರ ಪುತ್ರ ಭರತ್‌ರಾಜ್(19) ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿ. ಉಳ್ತೂರು ಜಾತ್ರೆ ಮುಗಿಸಿ ಭರತ್ ರಾಜ್ ಜೊತೆಗಿದ್ದ ತನ್ನ ಸ್ನೇಹಿತನನ್ನು ಅಂಪಾರಿನ ಮನೆಗೆ ಬಿಟ್ಟು ವಾಪಸಾಗುತ್ತಿದ್ದ ವೇಳೆ ಕೋಣಿ ಹೈಸ್ಕೂಲ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ.
ಜಾತ್ರೆ ಮುಗಿಸಿ ಸ್ನೇಹಿತನನ್ನು ಡ್ರಾಪ್ ಮಾಡಿ ಮನೆಗೆ ಮರಳುತ್ತಿದ್ದ ಭರತ್ ಬೈಕಿಗೆ ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗದಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದಿತ್ತು. ಢಿಕ್ಕಿ ರಭಸಕ್ಕೆ ಭರತ್ ರಸ್ತೆಗಪ್ಪಳಿಸಿದ ಪರಿಣಾಮ ತಲೆಗೆ ಗಂಭೀರ ಗಾಯಗಾಳಗಿದ್ದು ತೀವ್ರ ರಕ್ತಸ್ರಾವದಿಂದಾಗಿ ಪ್ರಜ್ನಾಹೀನನಾದ ಭರತ್‌ರಾಜ್‌ನನ್ನು ಕೂಡಲೇ ಕುಂದಾಪುರದ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಂಗಾಗ ದಾನ….
ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಫೆಬ್ರವರಿ 15ರಂದು ಮಿದುಳು ನಿಷ್ಕ್ರಿಯಗೊಂಡು ಭರತ್‌ರಾಜ್ ಸಾವನ್ನಪ್ಪಿದ್ದಾರೆ. ಪುತ್ರಶೋಕದ ನಡುವೆಯೂ ಭರತ್ ಕುಟುಂಬಿಕರು ಆತನ ಅಂಗಾಂಗಗಳನ್ನು ದಾನ ಮಾಡಲು ಮುಂದೆ ಬಂದಿದ್ದು, ಮೂತ್ರಪಿಂಡ, ಪಿತ್ತಜನಕಾಂಗ, ಹಾಗೂ ದೇಹದ ಇನ್ನಿತರ ಉಪಯುಕ್ತ ಅಂಗಗಳನ್ನು ದಾನ ಮಾಡಿದ್ದಾರೆ.
ಭರತ್ ಮೂಡ್ಲುಕಟ್ಟೆಯ ಎಮ್ಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದು ಆತನ ತಂದೆ ಧರ್ಮರಾಜ್ ಪೋಸ್ಟ್‌ಮಾಸ್ಟರ್ ಕಾರ್ಯದಿಂದ ಸ್ವಯಂ ನಿವೃತ್ತಿ ಪಡೆದು ಮನೆಯಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.