ಕರಾವಳಿ

ಕುಂದಾಪುರ(ವಕ್ವಾಡಿ): ಗೋಳಿಹಾಡಿ ಹಾಲುಹಬ್ಬ ಕೆಂಡಸೇವೆ ಸಂಭ್ರಮಕ್ಕೆ ಮೆರಗು ತಂದ ಬಿಗ್‌ಬಾಸ್, ಕಿರುತೆರೆ ಕಲಾವಿದರು

Pinterest LinkedIn Tumblr

ಕುಂದಾಪುರ: ತಾಲೂಕಿನ ವಕ್ವಾಡಿ ಗೋಳಿಹಾಡಿ ಶ್ರೀ ನಂದಿಕೇಶ್ವರ ಹಾಗೂ ಪಂಜುರ್ಲಿ ದೈವಸ್ಥಾನದಲ್ಲಿ ಗುರುವಾರದಂದು ಹಾಲುಹಬ್ಬ ಕೆಂಡಸೇವೆ ಸಂಭ್ರಮದಿಂದ ಜರುಗಿತು. ಈ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿದವರು ಬಿಗ್‌ಬಾಸ್ ತಂಡದವರು ಹಾಗೂ ಕಿರುತೆರೆ ಕಲಾವಿದರು.

ಕಾರಣಿಕ ಸ್ಥಳವಾಗಿ ಗುರುತಿಸಿಕೊಂಡ ಕುಂದಾಪುರ ತಾಲೂಕಿನ ವಕ್ವಾಡಿಯ ಈ ದೈವಸ್ಥಾನದಲ್ಲಿ ಶಿವರಾತ್ರಿ ತಿಂಗಳ ಎರಡನೇ ವಾರದಲ್ಲಿ ಹಾಲುಹಬ್ಬ ಹಾಗೂ ಕೆಂಡಸೇವೆ ವಿಜೃಂಭಣೆಯಿಂದ ಜರಗುತ್ತದೆ. ಗೋಳಿಹಾಡಿ ದೈವಸ್ಥಾನವು ಅನಾದಿ ಕಾಲದ ಹಿಂದಿನಿಂದಲೂ ಒಡಮೂಡಿದ ದೈವದ ಸ್ಥಳವಾಗಿದೆ. ಊರಿನಲ್ಲಿ ಕಾಲರಾ ಮೊದಲಾದ ಮಾರಕ ರೋಗಗಳು ಬಂದಾಗ ಹರಕೆ ಹೊತ್ತ ಸಂದರ್ಭ ಎಲ್ಲಾ ರೋಗ ರುಜಿನಗಳು ಮಾಯವಾಗಿ ಊರಿನಲ್ಲಿ ಸಮ್ರದ್ಧಿ ನೆಲಸಿದ ದೃಷ್ಟಾಂತಗಳು ಹಲವಿದೆ. ಒಡಮೂಡಿದ ನಂದಿ ಹಾಗೂ ಪಂಜುರ್ಲಿ ಇಲ್ಲಿನ ಪ್ರಧಾನ ದೈವವಾಗಿದೆ. ಊರಿನವರು ಕೇಳಿದ ಕೋರಿಕೆಯನ್ನು ಹಾಗೂ ಭಕ್ತರ ಇಷ್ಟಾರ್ಥಗಳನ್ನು ದೈವ ಈಡೇರಿಸಿದೆ ಎನ್ನುತ್ತಾರೆ ದೈವಸ್ಥಾನಕ್ಕೆ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದ ಉದ್ಯಮಿ ವಿ.ಕೆ. ಮೋಹನ್.

 

ಕಲಾವಿದರ ದಂಡು..
ಬಿಗ್‌ಬಾಸ್ ಕಳೆದ ಸೀಸನ್ ವಿನ್ನರ್ ಹಾಗೂ ನಟ ಪ್ರಥಮ್, ಈ ಸೀಸನ್ ಸ್ಪರ್ಧಿ ಸಮೀರ್ ಆಚಾರ್ಯ ಹಾಗೂ ಅವರ ಪತ್ನಿ ಶ್ರಾವಣಿ, ನಿರೂಪಕ ನಿರಂಜನ್ ದೇಶಪಾಂಡೆ, ಕಿರುತೆರೆಯ ಪ್ರಸಿದ್ಧ ಕಲಾವಿದರಾದ ರಾಧಾರಮಣ ಖ್ಯಾತಿಯ ಸುಜಾತಾ, ಚಿ.ಸೌ. ಸಾವಿತ್ರಿ ಖ್ಯಾತಿಯ ಗೌತಮಿ, ಮಿಲನ ಖ್ಯಾತಿಯ ಪ್ರಶಾಂತ್, ಕಿನ್ನರಿ ಖ್ಯಾತಿಯ ವೀಣಾ ಪೊನ್ನಪ್ಪ, ನೀಲಿ ಧಾರಾವಾಹಿಯ ನಟಿ ಕಾವ್ಯಾ, ಹರಹರ ಮಹಾದೇವ ಖ್ಯಾತಿಯ ಪ್ರಿಯಾಂಕಾ ಚಿಂಚೋಲ್ ಮೊದಲಾದ ಕಲಾವಿದರು ಗುರುವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಪಾಲ್ಘೊಂಡರು.

ನೀರು ನೀಡಿದರು…ಕುಷಲೋಪರಿ ವಿಚಾರಿಸಿದರು…
ಕಳೆದ ವರ್ಷ ಫೆ.15ಕ್ಕೆ ನಡೆದ ಇದೇ ಹಬ್ಬಕ್ಕೆ ಆಗಮಿಸಿದ್ದ ಪ್ರಥಮ್, ಈ ಬಾರಿಯೂ ಆಗಮಿಸಿದ್ದರು. ನೆರೆದ ಭಕ್ತಾಧಿಗಳನ್ನು ಖುದ್ದು ಮನೆಯವರಂತೆ ಮಾತನಾಡಿಸಿದರು. ಊಟದ ಪಂಕ್ತಿಯಲ್ಲಿ ನಡೆದು ಸಾಗಿ ನೀರು ವಿತರಣೆ ಮಾಡಿ ಜನರ ಕುಶಲೋಪರಿ ವಿಚಾರಿಸಿ ವಕ್ವಾಡಿಯ ಜನರ ಪ್ರೀತಿಗೆ ಪಾತ್ರರಾದರು. ಈ ಬಾರಿ ಪ್ರಥಮ್ ಕೆಲಸಕ್ಕೆ ನಿರಂಜನ್ ದೇಶಪಾಂಡೆ ಸಾಥ್ ನೀಡಿದರು. ಇಬ್ಬರೂ ಕೂಡ ಊಟದ ಪಂಕ್ತಿಯಲ್ಲಿ ಕುಳಿತ ಸಾರ್ವಜನಿಕರಿಗೆ ತಾವೇ ನೀರು ವಿತರಿಸಿ ತಮ್ಮ ಸರಳತೆಯನ್ನು ಕೂಡ ಪ್ರದರ್ಶಿಸಿದರು. ಸಮೀರ್ ಆಚಾರ್ಯ ಕೂಡ ಊಟಕ್ಕೆ ಕುಳಿತ ಮಕ್ಕಳಿಗೆ ಶ್ಲೋಕ ಹೇಳಿಸಿದರು. ತಾಲೂಕಿನ ಹಳ್ಳಿಗಾಡು ಪ್ರದೇಶಕ್ಕೆ ಬಿಗ್ ಬಾಸ್ ತಂಡ ಹಾಗೂ ಕಲಾವಿದರು ಬಂದಿದ್ದು, ಅವರನ್ನು ಕಾಣಲು ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಲ್ಲದೇ ಪರಸ್ಪರ ಮಾತನಾಡಿ ಸಂಭ್ರಮಿಸಿದರು.

ದೈವಸ್ಥಾನದಲ್ಲಿ ಕೆಂಡಸೇವೆ ಹಾಲುಹಬ್ಬದ ಪ್ರಯುಕ್ತ ಕಲಾಭಿವೃದ್ಧಿ ಹೋಮ, ಕಲಶಾಭಿಷೇಕ, ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗಿತು. ವಕ್ವಾಡಿ ಮೂಲದ ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್ ಅವರು ಅನ್ನಸಂತರ್ಪಣೆ ಸೇವೆ ನೀಡಿದ್ದಲ್ಲದೇ ಹಾಗೂ ದೇವಳಕ್ಕೆ ಪುಷ್ಪಾಲಂಕಾರ ಮಾಡಿಸಿದ್ದರು. ಈ ಸಂದರ್ಭ ಗೋಳಿಹಾಡಿ ಶ್ರೀ ನಂದಿಕೇಶ್ವರ ಮತ್ತು ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರ ಕರುಣಾಕರ ಶೆಟ್ಟಿ ಮೇಲ್ಮನೆ, ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸೇವಾಕರ್ತರಾದ ವಿ.ಕೆ. ಮೋಹನ್, ವಿ.ಕೆ. ಗೋಪಾಲ್, ಕುಟುಂಬಿಕರು ಮತ್ತು ವಿ.ಕೆ. ಸತೀಶ್, ವಿಕೆ. ಹರೀಶ್, ವಿ.ಕೆ. ರಾಘವೇಂದ್ರ ಕುಟುಂಬಿಕರು ಮೊದಲಾದವರು ಉಪಸ್ಥಿತರಿದ್ದರು.

ಕಳೆದ ಸೀಸನ್ ಬಿಗ್ ಬಾಸ್ ಗೆದ್ದ ಬಳಿಕ ಮೊದಲು ಈ ದೈವಸ್ಥಾನಕ್ಕೆ ಬಂದು ಹೋದ ದಿನವೇ ಒಂದು ಸಿನೆಮಾ ಒಪ್ಪಿಕೊಂಡೆ. ಇಲ್ಲಿ ಬಂದ ಬಳಿಕ ಶ್ರೇಯಸ್ಸು ಲಭಿಸಿದ್ದು ಒಟ್ಟು 7 ಸಿನೆಮಾಗೆ ಸೈನ್ ಮಾಡಿದೆ. ಇಲ್ಲಿನ ಜನರ ಜೊತೆ ಬೆರೆತು ಖುಷಿಯಾಗುತ್ತದೆ. ವಾತಾವರಣದಿಂದ ಮನಶಾಂತಿ ಸಿಗುತ್ತೆ. ಡಾ. ರಾಜಕುಮಾರ್ ಸಹಿತ ಬಹುತೇಕ ಎಲ್ಲಾ ನಟರು ಇಲ್ಲಿ ಬಂದಿದ್ದು ಕೇಳಿ ಖುಷಿಯಾಗಿದ್ದು ಅದಕ್ಕೆ ಎರಡನೇ ವರ್ಷವೂ ಬಂದಿದ್ದೇನೆ.
– ಪ್ರಥಮ್ (ಈ ಹಿಂದಿನ ಬಿಗ್ ಬಾಸ್ ಶೋ ವಿನ್ನರ್)

ವಿಘ್ನಗಳು, ಸಂಕಷ್ಟಗಳು ಕಡಿಮೆಯಾಗಲು ಭೂತಾರಾಧನೆ ನಡೆಯುತ್ತಿರುವ ಕಾರಣವೇ ದೇಶ ಸುಭೀಕ್ಷವಾಗಿದೆ. ದೈವಕ್ಕೆ ಪೂಜೆಯಾಗುವುದರಿಂದ ಉತ್ತಮ ಪ್ರೇರಣೆ ಸಿಗುತ್ತದೆ. ಮಕ್ಕಳಿಗೆ ಉತ್ತಮ ವಿದ್ಯಾಕ್ರಾಂತಿ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಯಲಿದೆ. ಈ ಕ್ರಾಂತಿಗೆ ಜನರ ಪ್ರೋತ್ಸಾಹ ಅಗತ್ಯವಾಗಿದೆ. ಬಿಗ್ ಬಾಸ್ ಮುಗಿದ ಬಳಿಕವೂ ನಾವು ಸೆಲೆಬ್ರೇಟಿಗಳಲ್ಲ. ನಿಜಕ್ಕೂ ಜನರೇ ಸೆಲೆಬ್ರೇಟಿಗಳು.
– ಸಮೀರ್ ಆಚಾರ್ಯ (ಬಿಗ್ ಬಾಸ್ ಸ್ಪರ್ಧಿ)

(ವರದಿ, ಚಿತ್ರ-ಯೋಗೀಶ್ ಕುಂಭಾಸಿ)

Comments are closed.